ಮೈಸೂರು: ಕೇಂದ್ರ ಪ್ರವಾಸೋದ್ಯಮ ಇಲಾಖೆ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಮೂರು ದಿನಗಳ ಕಾಲ "ಮೈಸೂರು ಸಂಗೀತ ಸುಗಂಧ" ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಕಾರ್ಯಕ್ರಮ ಉದ್ಘಾಟನೆ ಮಾಡುವುದರ ಜೊತೆಗೆ ಪುರಂದರದಾಸರ ಕೀರ್ತನೆ ಪ್ರಸ್ತಾಪಿಸಿದರು.
''ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಸಂತಸ ತಂದಿದೆ. ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ. ದೇಶ ಆರ್ಥಿಕವಾಗಿ ಸದೃಢವಾದರೆ ಎಲ್ಲಾ ರಂಗಗಳಲ್ಲೂ ಸದೃಢವಾಗುತ್ತದೆ. ಕರ್ನಾಟಕ ಸಂಗೀತ ಇಡೀ ದೇಶಾದ್ಯಂತ ಮನೆ ಮಾತಾಗಿದೆ. 'ಏಕ್ ಭಾರತ್ ಶ್ರೇಷ್ಠ ಭಾರತ್' ಸಾಕಾರಗೊಳ್ಳಲು ಸಂಗೀತ ಪ್ರೇರಣೆಯಾಗಿದೆ. ವಿಭಿನ್ನವಾದ ಭಾಷೆ ಸಂಸ್ಕೃತಿ ಹೊಂದಿದ್ದರೂ ದೇಶ ವಿವಿಧತೆಯಲ್ಲಿ ಏಕತೆಯಿಂದ ಕೂಡಿದೆ. ಕನ್ನಡ ಭಾಷೆ ಭಕ್ತಿ ಸಂಗೀತದ ಮೂಲಕ ಮನ ಮುಟ್ಟುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಮೂಲ ಮೈಸೂರು ಅನ್ನೋದು ಹೆಮ್ಮೆ ವಿಷಯ'' ಎಂದು ಉದ್ಘಾಟನೆ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.