ಮಂಡ್ಯ: ಉದ್ಯೋಗ ಅರಸಿ ಬಂದವರು ಯಾವುದೇ ರೀತಿಯಲ್ಲಿ ನಿರಾಸೆಗೊಳಗಾಗಬಾರದು. ನೋಂದಣಿ ಮಾಡಿದ ಪ್ರತಿಯೊಬ್ಬರಿಗೂ ಹಂತಹಂತವಾಗಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಎರಡು ದಿನಗಳ 'ಮಂಡ್ಯ ಟು ಇಂಡಿಯಾ' ಹೆಸರಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಇಂದು ಜ್ಯೋತಿ ಬೆಳಗುವ ಮೂಲಕ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಹೆಚ್‌ಡಿಕೆ (ETV Bharat) ಇಂದು ಆಯ್ಕೆಯಾದವರಿಗೆ ನಾಳೆಯೇ ನೇಮಕಾತಿ ಪತ್ರ ನೀಡುವ ತೀರ್ಮಾನ ಮಾಡಲಾಗಿದೆ. ಕೇವಲ ಮಂಡ್ಯ ಜಿಲ್ಲೆ ಅಷ್ಟೇ ಅಲ್ಲದೇ ಇತರೆ ಭಾಗದಿಂದ ಬಂದವರಿಗೂ ಉದ್ಯೋಗ ನೀಡಲಾಗುವುದು. ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ ಮಂಡ್ಯ ಜನತೆಗೆ ಈ ಮೂಲಕ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಅಟೋಮೊಬೈಲ್, ಇವಿ ಸೇರಿದಂತೆ ಕೆಲವು ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಬಿಇಎಂಲ್, ಹೆಚ್ಎಎಲ್ ಸೇರಿ ಹಲವು ಕಂಪನಿಗಳು ನೂರಾರು ಯುವಕ ಮತ್ತು ಯುವತಿಯರಿಗೆ ಉದ್ಯೋಗ ನೀಡಲು ಮುಂದೆ ಬಂದಿವೆ. ಐಟಿಐ, ಮೆಕ್ಯಾನಿಕಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಎಂಜಿನಿಯರ್ಗಳಿಗೆ ಉದ್ಯೋಗ ಮೇಳದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲದೇ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಆದವರಿಗೂ ಉದ್ಯೋಗ ನೀಡಲು ಮುಂದೆ ಬಂದಿವೆ. ಈ ಮೇಳದಿಂದ ಒಂದೂವರೆ ಸಾವಿರ ಕುಟುಂಬಗಳ ಮಕ್ಕಳಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಉದ್ಯೋಗ ಸಿಗದರು ನಿರಾಸೆರಾಗಬಾರದು. ಬಿಎ, ಬಿಕಾಂ, ಎಂಕಾಂ, ಎಂಎ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ ಸೈನ್ಸ್ ಮಾಡಿದವರಿಗೂ ಹಂತತಂತವಾಗಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಮೇಳದಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಗಳು ಕೂಡ ಭಾಗಿಯಾಗಿವೆ. ಭಾಗಿಯಾದ ಎಲ್ಲ ಕಂಪನಿಗಳಿಗೂ ಕೃತಜ್ಞತೆ ಸಲ್ಲಿಸುವೆ. ಎಲ್ಲರಿಗೂ ಉದ್ಯೋಗ ಕೊಡಿಸಲು ನಮ್ಮ ಇಲಾಖೆಯಲ್ಲಿ ಒಂದು ವಿಂಗ್ ಅನ್ನು ಶಾಶ್ವತವಾಗಿ ಇಡುತ್ತೇವೆ. ಆದರೆ, ನಮ್ಮ ವಿರುದ್ಧ ವಿರೋಧಿಗಳು ಲಘುವಾಗಿ ಮಾತನಾಡುತ್ತಾರೆ. ನಾನು ದೇಶದಲ್ಲಿ ಪ್ರವಾಸ ಮಾಡುತ್ತಿದ್ದರೂ ಸಹ ನನ್ನ ಗಮನ ಮಂಡ್ಯ ಹಾಗೂ ರಾಜ್ಯದ ಮೇಲೆ ಯಾವಾಗಲೂ ಇದ್ದೇ ಇರುತ್ತದೆ. ರಾಜ್ಯದಲ್ಲಿ ಕೆಲವು ಕೈಗಾರಿಕೆಗಳನ್ನು ತರಲು ಚರ್ಚೆ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ನಿಮ್ಮ ನಿರೀಕ್ಷೆ ಕೂಡ ಇದೆ. ಆದರೆ, ರಾಜ್ಯ ಸರ್ಕಾರದಿಂದ ನಮಗೆ ಸಹಕಾರ ಇಲ್ಲ. ಸಣ್ಣ ಚರ್ಚೆ ಮಾಡಲು ಸಹ ಅವಕಾಶ ಕೊಡುತ್ತಿಲ್ಲ. ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಮಾಡಿಕೊಳ್ಳುತ್ತಿದ್ದಾರೆ. ಕನಿಷ್ಠ ಸೌಜನ್ಯ ಇಲ್ಲದ ಸರ್ಕಾರ ಇದು. ಕರ್ನಾಟಕಕ್ಕೆ ಕುಮಾರಸ್ವಾಮಿ ಏಕೆ ಬರುತ್ತಾನೆ ಎಂಬ ಸಣ್ಣತನ ಅವರದ್ದು ಎಂದು ರಾಜ್ಯ ಸರ್ಕಾರದ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದರು.
ಉದ್ಯೋಗ ಮೇಳದಲ್ಲಿ ಇಂದು ಸುಮಾರು 150ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಸುಮಾರು ಮೂರು ಸಾವಿರ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯ ನಿರೀಕ್ಷೆ ಇದೆ.
ಇದನ್ನೂ ಓದಿ:PUC ಆದವರಿಗೆ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ: ಮೊದಲ ತಿಂಗಳಿಂದಲೇ 40 ಸಾವಿರ ಸಂಬಳ, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಯಾವಾಗ?