ಶಿವಮೊಗ್ಗ: ಇಂದು ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರೈತರಿಗೆ ಕಿವಿಮಾತು ಹೇಳಿದ್ದಾರೆ.
ಕೆಳದಿ ಶಿವಪ್ಪ ನಾಯಕ ಕೃಷಿ, ತೋಟಗಾರಿಕೆ ವಿಜ್ಞಾನಗಳ ಮಹಾವಿಶ್ವವಿದ್ಯಾನಿಲಯ ನವಲೆ ಕೃಷಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನದ ಕೃಷಿ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೃಷಿ ಮೇಳದ ಮೂಲಕ ರೈತರಿಗೆ ಮಾಹಿತಿ, ತಂತ್ರಜ್ಞಾನ ತಿಳಿಸಲಾಗುತ್ತಿದೆ. ಕಳೆದ ವರ್ಷ ಬರಗಾಲದಿಂದ ಮೇಳ ನಡೆಸಿಲ್ಲ. ಈ ವರ್ಷ ಉತ್ತಮ ಮಳೆಯಿಂದ ರೈತರು ಸಂತಸದಲ್ಲಿದ್ದಾರೆ ಎಂದರು.
ಮುಂದುವರೆದು ಮಾತನಾಡಿ, ಇಂದು ಭತ್ತದ ಕೃಷಿಯೇ ನಿಂತು ಹೋಗುವ ಪರಿಸ್ಥಿತಿ ಬಂದಿದೆ. ಭತ್ತ ಬಿಟ್ಟು ಅಡಿಕೆ ಹಾಕುತ್ತಿದ್ದಾರೆ. ಇದರಿಂದ ಮುಂದೆ ಸಮಸ್ಯೆ ಉಂಟಾಗುತ್ತದೆ. ಈಗ ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್ ಅಡಿಕೆ ಬೆಳೆಯಲಾಗುತ್ತಿದೆ. ಸಂಪ್ರದಾಯಬದ್ದವಾದ ಕೃಷಿ ಕಷ್ಟವಾಗುತ್ತಿದೆ. ಹೀಗಾಗಿ, ತಂತ್ರಜ್ಞಾನದ ಅಳವಡಿಕೆ ಬಹಳ ಮುಖ್ಯವಾಗಿದೆ. ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಗಳು ಕೆಲಸ ಮಾಡಬೇಕಿದೆ. ಇಂದು ಐಟಿ-ಬಿಟಿ ಉದ್ಯೋಗಿಗಳು ಕೃಷಿ ಭೂಮಿ ಖರೀದಿಸಿ ಹಲವು ಬೆಳೆ ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.
ಕೃಷಿ ವಿವಿ ವ್ಯಾಪ್ತಿಯಲ್ಲಿನ ಕೃಷಿ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.
ಕೃಷಿ ಮೇಳವನ್ನು ಬೆಕ್ಕಿನಕಲ್ಮಠದ ಪೀಠಾಧಿಪತಿ ಮುರುಘಾರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಚಿವ ಅರಗ ಜ್ಞಾನೇಂದ್ರ, ವಿವಿಯ ಉಪ ಕುಲಪತಿ ಡಾ.ಆರ್.ಸಿ ಜಗದೀಶ್ ಸೇರಿದಂತೆ ಹಲವರು ಇತರರಿದ್ದರು.
ಮೇಳದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಯಂತ್ರದ ವಿವಿಧ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ.
ಇದನ್ನೂ ಓದಿ: ಟರ್ಕಿ ದೇಶದ ಸಜ್ಜೆ ಬೆಳೆದು ಬಂಪರ್ ಲಾಭ ಪಡೆದ ಗಂಗಾವತಿ ರೈತ: ಹೊಲಕ್ಕೆ ಕೃಷಿ ಅಧಿಕಾರಿಗಳು ಭೇಟಿ