ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಇಂದು ಸಂಜೆ ಹೆಚ್ಎಂಟಿ (ಹಿಂದೂಸ್ತಾನ್ ಮಷಿನ್ ಅಂಡ್ ಟೂಲ್ಸ್) ಕಂಪನಿಯ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ ಸೇರಿ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಸಚಿವರು, ಕಂಪನಿ ಕಾರ್ಯ ಚಟುವಟಿಕೆ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದುಕೊಂಡರು.
ವಹಿವಾಟು, ನಿವ್ವಳ ಲಾಭ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ಕುಮಾರಸ್ವಾಮಿ ಅವರು, ಕಂಪನಿಯ ಆರ್ಥಿಕತೆ, ಉತ್ಪಾದನೆ, ಇನ್ನಿತರೆ ಸ್ಥಿತಿಗತಿಗಳ ಬಗ್ಗೆ ಸಚಿವರು ಅಧಿಕಾರಿಗಳ ಜತೆ ಚರ್ಚಿಸಿದರು. ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆದಿದ್ದ ಕಂಪನಿ ಇವತ್ತು ದುಸ್ಥಿತಿಗೆ ಬಂದಿದೆ. ಕಂಪನಿಯನ್ನು ಮತ್ತಷ್ಟು ಸದೃಢ ಮಾಡಿ. ಅದಕ್ಕೆ ಅಗತ್ಯವಾದ ಉಪ ಕ್ರಮ ಕೈಗೊಳ್ಳಿ. ಅದಕ್ಕೆ ಅಗತ್ಯವಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಎಂದು ರಾಜೇಶ್ ಕೊಹ್ಲಿ ಅವರಿಗೆ ಸಚಿವರು ಸೂಚಿಸಿದರು.
ಮೋದಿ ಅವರ ಆತ್ಮನಿರ್ಭರ ಪರಿಕಲ್ಪನೆಯಂತೆ ಹೆಚ್ಎಂಟಿ ಪುನಶ್ಚೇತನ :ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾರಿಕೆ ಅಭಿವೃದ್ಧಿ ಬಗ್ಗೆ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಆತ್ಮನಿರ್ಭರ ಪರಿಕಲ್ಪನೆಯ ಮೂಲಕ ಹೆಚ್ಎಂಟಿ ಕಂಪನಿಯನ್ನು ಪುನರುಜ್ಜೀವನಗೊಳಿಸಬಹುದು. ಪ್ರಧಾನಿಯವರ ಆಲೋಚನೆಯಂತೆ ಚಿಂತಿಸಿ ಕಂಪನಿಯ ಚೇತರಿಕೆಗೆ ಮುಂದಾಗಿ. ಅದಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಎಂದು ಹೆಚ್ಡಿಕೆ ಹೇಳಿದರು.