ಕರ್ನಾಟಕ

karnataka

ETV Bharat / state

"ತಪ್ಪು ಮುಚ್ಚಿಕೊಳ್ಳಲು ಇನ್ಸ್​ಪೆಕ್ಟರ್ ಸಸ್ಪೆಂಡ್": ನಾಗಮಂಗಲಕ್ಕೆ ಭೇಟಿ ನೀಡಿದ ಹೆಚ್​​ಡಿಕೆ ಕಿಡಿ - HDK visited Nagamangala - HDK VISITED NAGAMANGALA

ನಾಗಮಂಗಲಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ನೊಂದವರಿಗೆ ಸ್ವತಃ ಪರಿಹಾರ ವಿತರಿಸಿ, ಸಾಂತ್ವನ ಹೇಳಿದರು.

HDK VISITED NAGAMANGALA
ನಾಗಮಂಗಲಕ್ಕೆ ಹೆಚ್​.ಡಿ.ಕುಮಾರಸ್ವಾಮಿ ಭೇಟಿ (ETV Bharat)

By ETV Bharat Karnataka Team

Published : Sep 13, 2024, 5:05 PM IST

ಮಂಡ್ಯ: "ಇದು ಸರ್ಕಾರದ ವೈಫಲ್ಯ. ರಾಜ್ಯ ಸರ್ಕಾರದ ಅಧಿಕಾರಿಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದೆ. ಸಿಕ್ಕ ಸಿಕ್ಕ ಅಮಾಯಕರನ್ನು ಗಲಭೆ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡುತ್ತಿದ್ದಾರೆ. ಅದಲ್ಲದೇ ಇಂತಹ ಘಟನೆಯನ್ನು ಸಣ್ಣದು ಎಂದಿದೆ ಈ ಸರ್ಕಾರ" ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ದೂರಿದರು.

ನಾಗಮಂಗಲಕ್ಕೆ ಹೆಚ್​.ಡಿ.ಕುಮಾರಸ್ವಾಮಿ ಭೇಟಿ (ETV Bharat)

ನೆಲಮಂಗಲ ಪಟ್ಟಣಕ್ಕೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದು, ಗಲಭೆಯಿಂದ ಹಾನಿಗೊಳಗಾದ ಅಂಗಡಿ ಮುಂಗಟ್ಟುಗಳನ್ನು ವೀಕ್ಷಿಸಿದರು. ಇದೇ ವೇಳೆ, ನೊಂದವರಿಗೆ ಸ್ವತಃ ಪರಿಹಾರ ವಿತರಿಸಿದ ಸಂಸದ ಹೆಚ್​ಡಿಕೆ​ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಪೊಲೀಸ್ ಠಾಣೆ ಎದುರು ಇರುವ ಅಂಗಡಿಯನ್ನೇ ಸುಟ್ಟಿದ್ದಾರೆ. ಯಾವ ಸಮಾಜವನ್ನು ದೂಷಿಸಲಿ ನಾನು. ಇಂತಹ ಕೋಮು ಸಂಘರ್ಷ ಬೇಡ" ಎಂದು ಮನವಿ ಮಾಡಿದರು.

"ಘಟನೆ ನಡೆದ ಜಾಗದಲ್ಲಿ ಇನ್ಸ್​ಪೆಕ್ಟರ್​, ಡಿವೈಎಸ್ಪಿ ಯಾರೂ ಇರಲಿಲ್ಲ‌. ರಾತ್ರಿ ಒಂದು ಗಂಟೆ ಸಮಯದಲ್ಲಿ ರವಿ ಎನ್ನುವವನು ಪೊಲೀಸರಿಗೆ ದೂರು ನೀಡಿದ್ದಾನೆ. ಆಸ್ಪತ್ರೆಯಲ್ಲಿ ರವಿ ಅಷ್ಟೂ ಆರೋಪಿಗಳ ಹೆಸರು ಕೊಟ್ಟಿದ್ದಾನೆ. ಅದು ಹೇಗೆ ಸಾಧ್ಯ?" ಎಂದು ಎಫ್​ಐಆರ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

"1990ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಕೆಳಗಿಳಿಸಲು ರಾಮನಗರದಲ್ಲಿ ಗಲಭೆ ಸೃಷ್ಟಿಸಿ ರಾಜೀನಾಮೆ ಕೊಡುವಂತೆ ಮಾಡಿದ್ದರು. ಅವತ್ತು ನಡೆದಿದ್ದು ಕೋಮು ಗಲಭೆ ಅಲ್ಲ. ಕಾಂಗ್ರೆಸ್​ನ ಸ್ಪಾನ್ಸರ್ಡ್ ಕಾರ್ಯಕ್ರಮ. ಇತ್ತೀಚಿಗೆ ಕಾಂಗ್ರೆಸ್ ಓಲೈಕೆ ರಾಜಕಾರಣ ಜಾಸ್ತಿಯಾಗಿದೆ. ಈ ಘಟನೆಗೆ ಕಾಂಗ್ರೆಸ್ ಸಂಪೂರ್ಣ ಕಾರಣ. ಕಲ್ಲು ತೂರಲು ಎಲ್ಲಿಂದ ಕಲ್ಲು ಬಂತು? ಪೆಟ್ರೋಲ್ ಬಾಂಬ್ ಎಲ್ಲಿಂದ ಬಂತು? 10 ನಿಮಿಷಗಳಲ್ಲಿ ಹೇಗೆ ತರಲು ಸಾಧ್ಯ? ಇದು ವ್ಯವಸ್ಥಿತವಾಗಿ ನಡೆದ ಗಲಭೆ. ಎರಡು ಕೋಮಿನವರ ಅಂಗಡಿಗಳು ನಾಶವಾಗಿವೆ. ಮಾಡಿದ ತಪ್ಪು ಮುಚ್ಚಿಕೊಳ್ಳಲು ಇನ್ಸ್​​ಪೆಕ್ಟರ್​ ಸಸ್ಪೆಂಡ್ ಮಾಡಿದ್ದಾರೆ" ಎಂದು ಕಿಡಿಕಾರಿದರು.

ಪ್ರತಿಯೊಂದರಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇಲ್ಲಿ ಅಮಾಯಕ‌ ಜನರ ಬದುಕು‌ ಬೀದಿಗೆ ಬಂದಿದೆ. ಗಲಭೆಯಲ್ಲಿ ಪೊಲೀಸರನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಬರೆದಿದ್ದಾರೆ. ಪೊಲೀಸರಿಗೆ ಭದ್ರತೆ ನೀಡದ ದರಿದ್ರ ಸರ್ಕಾರ ರಾಜ್ಯದಲ್ಲಿದೆ. ಆಗಿರುವ ಲೋಪ ಒಪ್ಪಿಕೊಳ್ಳುವುದು ಬಿಟ್ಟು ಸಮುದಾಯಗಳ ನಡುವೆ ಕಂದಕ ತೊಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಗರಂ ಆದರು.

ನೊಂದವರಿಗೆ ಆರ್ಥಿಕ ನೆರವು:ಇದೇ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಘಟನೆಯಲ್ಲಿ ಆಸ್ತಿಪಾಸ್ತಿ, ಜೀವನೋಪಾಯ ಕಳೆದುಕೊಂಡ ಅನೇಕರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಸುಮಾರು 10 ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಪರಿಹಾರವಾಗಿ ಕೊಟ್ಟರು.

''ಸರ್ಕಾರ ಸರಿಯಾಗಿ ಅಂದಾಜು ಮಾಡಿ ಕನಿಷ್ಠ ಶೇ.70ರಿಂದ 80ರಷ್ಟು ಪರಿಹಾರ ಕೊಡಬೇಕು. ನಾನು ಕೊಡುವುದು ಆರಂಭದಲ್ಲಿ ಅವರ ಜೀವನೋಪಾಯಕ್ಕೆ ಮಾತ್ರ. ಅನೇಕ ವ್ಯಾಪಾರಿಗಳು ಇಡೀ ಅಸ್ತಿಯನ್ನೇ ಕಳೆದುಕೊಂಡಿದ್ದಾರೆ. ಅವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ. ಎರಡೂ ಸಮುದಾಯಗಳ ಜನರಿಗೂ ನೆರವಾಗಿದ್ದೇನೆ'' ಎಂದು ಹೆಚ್​ಡಿಕೆ ತಿಳಿಸಿದರು.

ಇದನ್ನೂ ಓದಿ:ನಾಗಮಂಗಲ ಗಲಾಟೆ ಸಂಬಂಧ ಪಿಎಸ್​ಐ ಅಮಾನತು, ಡಿವೈಎಸ್‌ಪಿ ವಿರುದ್ಧವೂ ತನಿಖೆ: ಡಾ.ಜಿ.ಪರಮೇಶ್ವರ್ - Home Minister Parameshwar

ABOUT THE AUTHOR

...view details