ಮೈಸೂರು: ಲೂಟಿ ಮಾಡುವವರ ಪಾಲಿಗೆ ನಾನು ನಾಗರ ಹಾವೇ ಹಾಗೂ ಡಿ.ಕೆ.ಶಿವಕುಮಾರ್ ಪಾಲಿಗೂ ನಾನು ನಾಗರ ಹಾವೇ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿಂದು ನಡೆದ ಬಿಜೆಪಿ, ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನಾಂದೋಲನ ಸಭೆಯಲ್ಲಿ ಮಾತನಾಡಿದ್ದ ಡಿ.ಕೆ ಶಿವಕುಮಾರ್ ಭಾಷಣವನ್ನು ವೇದಿಕೆಯ ಸ್ಕ್ರೀನ್ ಮೇಲೆ ಪ್ರದರ್ಶಿಸಿ ವಾಗ್ದಾಳಿ ನಡೆಸಿದರು.
ಬಿ ಎಸ್ ಯಡಿಯೂರಪ್ಪ ಹಾಗೂ ನನ್ನ ನಡುವೆ ಬಿರುಕು ಮೂಡಿಸಲು ಡಿಕೆಶಿ ಶ್ರಮ ಪಟ್ಟು ಕೆಲಸ ಮಾಡುತ್ತಿದ್ದಾರೆ. ನನ್ನನ್ನು, ಯಡಿಯೂರಪ್ಪ ಅಂದು ವಿಧಾನಸಭೆಯಲ್ಲಿ ನಾಗರ ಹಾವು ಅಂದರು. ಆದರೆ ನಾನು ಡಿಕೆಶಿ ಪಾಲಿಗೆ ನಾಗರ ಹಾವೇ. ಲೂಟಿ ಮಾಡುವ ಡಿ.ಕೆ. ಶಿವಕುಮಾರ್ಗೆ ನಾನು ನಾಗರ ಹಾವು ಇದ್ದ ಹಾಗೆ ಎಂದು ತಿರುಗೇಟು ನೀಡಿದರು.
ಈ ಬಂಡೆ ಸಿದ್ದರಾಮಯ್ಯನವರ ಜೊತೆ ಇರುತ್ತದೆ ಎಂದು ನಿನ್ನೆ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಇನ್ನು ಮುಂದೆ ಸಿದ್ದರಾಮಯ್ಯನವರ ಕಥೆ ಮುಗಿಯಿತು. ನಾನು ಇವರನ್ನು ನಂಬಿ 2018 ರಲ್ಲಿ ಬಂಡೆಯನ್ನ ನನ್ನ ಮೈಮೇಲೆ ಎಳೆದುಕೊಂಡೆ. ಲೋಕಸಭೆಯಲ್ಲಿ ಕಾಂಗ್ರೆಸ್ನವರು 9ನೇ ಸ್ಥಾನವನ್ನು ಹೇಗೆ ಗೆದ್ದಿದ್ದಾರೆ ಗೊತ್ತಿದೆ. ಅದಕ್ಕೆ ನಾನು 8 ಸ್ಥಾನ ಎಂದು ಹೇಳುತ್ತೇನೆ. ನನ್ನ ಕಂಡರೆ ಹೊಟ್ಟೆಉರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಳ್ಳೆಯ ಆಡಳಿತ ನೀಡಿದರೆ ನಮಗೆ ಯಾಕೆ ಹೊಟ್ಟೆಉರಿ. ನನ್ನ ಮೇಲೆ ಒಂದು ಕಪ್ಪುಚುಕ್ಕೆ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗದ ಮುಖ್ಯಮಂತ್ರಿ ಅಲ್ಲ, ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಎಂದರು.