ಬೆಂಗಳೂರು: ಅಭ್ಯರ್ಥಿಗಳಲ್ಲಿ ಸ್ಥಳೀಯ ಭಾಷೆಯ ಜ್ಞಾನ ಮತ್ತು ಪ್ರಾವೀಣ್ಯತೆ ಹೊಂದಿರುವ ನಿಟ್ಟಿನಲ್ಲಿ ಆರ್ಆರ್ಬಿಗಳ ನೇಮಕಾತಿ ನಿಯಮಗಳನ್ನು ಮಾರ್ಪಡಿಸುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸೇವೆಗಳ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಒಳಗೊಂಡಿರುವ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ (ಆರ್ಆರ್ಬಿ) ಕಾರ್ಯಕ್ಷಮತೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ, ಅವರು ಅಭ್ಯರ್ಥಿಗಳಲ್ಲಿ ಸ್ಥಳೀಯ ಭಾಷೆಯ ಜ್ಞಾನ ಮತ್ತು ಪ್ರಾವೀಣ್ಯತೆ ಖಚಿತಪಡಿಸಿಕೊಳ್ಳಲು ಆರ್ಆರ್ಬಿಗಳ ನೇಮಕಾತಿ ನಿಯಮಗಳನ್ನು ಪರಿಶೀಲಿಸಲು ಮತ್ತು ಅದನ್ನು ಸೂಕ್ತವಾಗಿ ಮಾರ್ಪಡಿಸಲು ಹಣಕಾಸು ಸೇವೆಗಳ ಇಲಾಖೆಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್ಆರ್ಬಿ) ಭಾಗವಹಿಸಿದವು. ವ್ಯವಹಾರದ ಕಾರ್ಯಕ್ಷಮತೆ, ಡಿಜಿಟಲ್ ತಂತ್ರಜ್ಞಾನ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಕೃಷಿ ಮತ್ತು ಸೂಕ್ಷ್ಮ ಮತ್ತು ಸಣ್ಣ ಉದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ವ್ಯವಹಾರ ಬೆಳವಣಿಗೆ ಉತ್ತೇಜಿಸುವ ಬಗ್ಗೆ ಸಭೆಯು ಕೇಂದ್ರೀಕರಿಸಿತು. ಗ್ರಾಮೀಣ ಆರ್ಥಿಕತೆ ಬೆಂಬಲಿಸುವಲ್ಲಿ ಆರ್ಆರ್ಬಿಗಳ ಪ್ರಮುಖ ಪಾತ್ರವನ್ನು ಗಮನಿಸಿದ ಕೇಂದ್ರ ಹಣಕಾಸು ಸಚಿವರು, ತಮ್ಮ ಪ್ರಾಯೋಜಕ ಬ್ಯಾಂಕುಗಳ ಸಕ್ರಿಯ ಬೆಂಬಲದೊಂದಿಗೆ ಭಾರತ ಸರ್ಕಾರದ ವಿವಿಧ ಪ್ರಮುಖ ಯೋಜನೆಗಳಾದ ಮುದ್ರಾ, ಪ್ರಧಾನಮಂತ್ರಿ ವಿಶ್ವಕರ್ಮ ಇತ್ಯಾದಿಗಳ ಅಡಿಯಲ್ಲಿ ಸಾಲ ವಿತರಣೆ ಹೆಚ್ಚಿಸಲು ಆರ್ಆರ್ಬಿಗಳನ್ನು ಒತ್ತಾಯಿಸಿದರು.
ಕೃಷಿ ಸಾಲ ವಿತರಣೆಯಲ್ಲಿನ ಪಾಲು ಹೆಚ್ಚಳಕ್ಕೆ ಸೂಚನೆ:'ಒಂದು ರಾಜ್ಯ - ಒಂದು ಆರ್ಆರ್ಬಿ' ಪರಿಕಲ್ಪನೆಯಡಿ ಆರ್ಆರ್ಬಿಗಳ ವಿಲೀನದ ಪ್ರಸ್ತಾಪದ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕೇಂದ್ರ ಹಣಕಾಸು ಸಚಿವರು ರಾಜ್ಯ ಸರ್ಕಾರಗಳಿಗೆ ಇದೇ ವೇಳೆ ಮನವಿ ಮಾಡಿದರು. ಜೊತೆಗೆ, ಸಭೆಯಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳಾದ ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮುಂತಾದವುಗಳ ಮೇಲೆ ವಿಶೇಷ ಗಮನಹರಿಸಿ, ತಳಮಟ್ಟದಲ್ಲಿ ಕೃಷಿ ಸಾಲ ವಿತರಣೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಸಚಿವರು ನಿರ್ದೇಶನ ನೀಡಿದರು.