ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ 2024-25 ಅನ್ನು ಎಫ್‌ಕೆಸಿಸಿಐ ಸ್ವಾಗತಿಸುತ್ತದೆ. ಇದು ಸುಧಾರಣೆಗಳು ಮತ್ತು ಜನಪ್ರಿಯತೆಯ ನಡುವೆ ಸಮತೋಲನ ತರಲು ಕೇಂದ್ರೀಕೃತವಾಗಿದೆ. ಇದು ವಿಕಸಿತ ಭಾರತ ನಿರ್ಮಾಣಕ್ಕೆ ಉತ್ತೇಜಿಸುವ ಬಜೆಟ್ ಆಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದರು.
ಕೇಂದ್ರ ಬಜೆಟ್ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಉದ್ಯೋಗ, ಕೌಶಲ್ಯ, ಎಂಎಸ್‌ಎಂಇ ಮತ್ತು ಮಧ್ಯಮ ವರ್ಗದ ಮೇಲೆ ಕೇಂದ್ರೀಕರಿಸುವ ವೇಗದ ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ಬಜೆಟ್ ಆಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರವಹಿಸುವ ಸಣ್ಣ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್‌ನಲ್ಲಿದೆ ಎಂದು ಶ್ಲಾಘಿಸಿದರು.
ಇದು ದೂರದೃಷ್ಟಿಯುಳ್ಳ ದೂರಗಾಮಿ ಬಜೆಟ್ ಆಗಿದೆ. ಸಂಶೋಧನೆ, ಆವಿಷ್ಕಾರಕ್ಕೆ ಬಜೆಟ್ ಅತೀ ಹೆಚ್ಚು ಒತ್ತುಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಸಹಯೋಗದಿಂದ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಅಭಿವೃದ್ಧಿಗೆ ದೂರಗಾಮಿ ಕೊಡುಗೆ ನೀಡುವ ಉಪಕ್ರಮಗಳು ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರವು ಪಿಎಲ್‌ಐ ಜೊತೆಗೆ ಇಎಲ್‌ಐ (ನೌಕರ ಲಿಂಕ್ಡ್ ಇನ್ಸೆಂಟಿವ್) ಯೋಜನೆಯ ಮೇಲೆ ಸ್ಪಷ್ಟವಾಗಿ ಗಮನಹರಿಸಿದೆ. ಇಪಿಎಫ್‌ಒ ಮೂಲಕ ಮೊದಲ ಬಾರಿಗೆ ಕೆಲಸ ಮಾಡುವವರಿಗೆ ವೇತನ ಪ್ರಯೋಜನ ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪ್ರಯತ್ನಗಳನ್ನು ಎಫ್‌ಕೆಸಿಸಿಐ ಸ್ವಾಗತಿಸುತ್ತದೆ. ಉದ್ಯೋಗ ಮತ್ತು ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉನ್ನತ ಶಿಕ್ಷಣಕ್ಕಾಗಿ 10 ಲಕ್ಷದವರೆಗಿನ ಸಾಲಗಳಿಗೆ ಹೆಚ್ಚುವರಿ ಬೆಂಬಲ ನೀಡಲಾಗಿದೆ. ಇದು ವಿಕಸಿತ ಭಾರತದ ಗುರಿಯನ್ನು ವೇಗವಾಗಿ ಸಾಧಿಸಲು ಸಹಾಯ ಮಾಡಲಿದೆ ಎಂದರು.