ಕರ್ನಾಟಕ

karnataka

ನಿದ್ರೆ ಮಂಪರಿನ ಚಾಲಕರ ಎಚ್ಚರಿಸುವ, ಮನೆಗಳ್ಳತನ ತಡೆಯುವ ವಿಶಿಷ್ಟ ಉಪಕರಣ: ಇದು ಉಡುಪಿ ಡ್ರೈವರ್ ಚಮತ್ಕಾರ! - Driver invented unique devices

By ETV Bharat Karnataka Team

Published : Jul 11, 2024, 9:34 PM IST

ವಾಹನ ಚಾಲನೆ ವೇಳೆಯಲ್ಲಿ ನಿದ್ರೆ ಮಂಪರಿನಲ್ಲಿರುವ ಚಾಲಕರನ್ನ ಎಚ್ಚರಿಸುವ ಹಾಗೂ ಮನೆಗೆ ಕಳ್ಳರು ನುಗ್ಗಿದಾಗ ಅಲರ್ಟ್ ಮಾಡಿರುವ ವಿಶಿಷ್ಟ ರೀತಿಯ ಎರಡು ಉಪಕರಣಗಳನ್ನು ಉಡುಪಿ ಜಿಲ್ಲೆಯ ಪ್ರಭಾಕರ ಮೇಸ್ತ ಎಂಬುವರು ತಯಾರಿಸಿದ್ದಾರೆ.

ನಿದ್ರೆ ಮಂಪರಿನ ಚಾಲಕರ ಎಚ್ಚರಿಸುವ, ಮನೆಗಳ್ಳತನ ತಡೆಯುವ ವಿಶಿಷ್ಟ ಉಪಕರಣ ಆವಿಷ್ಕರಿಸಿದ ಉಡುಪಿ ಡ್ರೈವರ್
ನಿದ್ರೆ ಮಂಪರಿನ ಚಾಲಕರ ಎಚ್ಚರಿಸುವ, ಮನೆಗಳ್ಳತನ ತಡೆಯುವ ವಿಶಿಷ್ಟ ಉಪಕರಣ ಆವಿಷ್ಕರಿಸಿದ ಉಡುಪಿ ಡ್ರೈವರ್ (ETV Bharat)

ನಿದ್ರೆ ಮಂಪರಿನ ಚಾಲಕರ ಎಚ್ಚರಿಸುವ, ಮನೆಗಳ್ಳತನ ತಡೆಯುವ ವಿಶಿಷ್ಟ ಉಪಕರಣ ಆವಿಷ್ಕರಿಸಿದ ಉಡುಪಿ ಡ್ರೈವರ್ (ETV Bharat)

ಉಡುಪಿ:ವಾಹನ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲಿ ಚಾಲಕ ನಿದ್ರೆಗೆ ಜಾರುವುದು ಸಹ ಒಂದಾಗಿದೆ. ಹಾಗೆ, ಮನೆಗಳಿಗೆ ಎಷ್ಟೇ ಭದ್ರತೆ ಇದ್ದರೂ ಕಳ್ಳರು ತಮ್ಮ ಚಾಲಾಕಿತನದಿಂದ ಒಳಗೆ ನುಸುಳುತ್ತಾರೆ. ಇಂತಹ ವಾಹನ ಅಪಘಾತ ಹಾಗೂ ಮನೆಗಳ್ಳತನ ತಡೆಯುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಸಾಮಾನ್ಯ ಮೆಕ್ಯಾನಿಕ್ ಕಂ ಚಾಲಕರೊಬ್ಬರು ವಿಶಿಷ್ಟ ರೀತಿಯ ಉಪಕರಣಗಳನ್ನು ಸಿದ್ಧಪಡಿಸಿದ್ದಾರೆ.

ಹೌದು, ಕಲ್ಯಾಣಪುರ ಸಮೀಪದ ಎಡಬೆಟ್ಟು ನಿವಾಸಿ, 58 ವರ್ಷದ ಪ್ರಭಾಕರ ಮೇಸ್ತ ಎಂಬುವರು, ವಾಹನ ಚಲಾಯಿಸುವಾಗ ಚಾಲಕನಿಗೆ ನಿದ್ದೆ ಬಂದರೆ ಎಚ್ಚರಿಸುವ ಹಾಗೂ ಮನೆಗೆ ಕಳ್ಳರು ನುಗ್ಗಿದಾಗ ಮೊಳಗುವ ಸೈರನ್​ ಅನ್ನು ತಯಾರಿಸಿದ್ದಾರೆ. 7ನೇ ತರಗತಿ ಓದಿರುವ ಪ್ರಭಾಕರ, ತಮ್ಮ 16ನೇ ವಯಸ್ಸಿಗೆ ಗ್ಯಾರೇಜ್ ಸೇರಿಕೊಂಡಿದ್ದರು. ಬಳಿಕ ಮೆಕ್ಯಾನಿಕ್ ಆಗಿ ತದನಂತರ ವೃತ್ತಿಪರ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಪ್ರಭಾಕರ ಅವರಿಗೆ ಮೊಬೈಲ್​ ನೋಡುವಾಗ ಈ ವಿಶಿಷ್ಟ ಉಪಕರಣಗಳ ಆವಿಷ್ಕರಿಸುವ ಆಲೋಚನೆ ಮೂಡಿದತಂತೆ. ಅದರಂತೆಯೇ, ತಮ್ಮ ವಿಶೇಷ ಕೌಶಲ್ಯದಿಂದ ಎರಡು ಉಪಕರಣಗಳನ್ನು ಸಿದ್ಧಪಡಿಸಿದ್ದಾರೆ.

ವಾಹನದ ಉಪಕರಣ ಹೇಗೆ ಕೆಲಸ ಮಾಡುತ್ತದೆ?: ವಾಹನ ಚಲಾವಣೆ ವೇಳೆ ಚಾಲಕನಿಗೆ ನಿದ್ದೆ ಬಾರದಂತೆ ಎಚ್ಚರಿಸುವ ಸಾಧನವನ್ನು ಪ್ರಭಾಕರ ಮೇಸ್ತ ಕಂಡು ಹಿಡಿದಿದ್ದಾರೆ. ಈ ಉಪಕರಣ ಅಳವಡಿಸಿರುವ ವಾಹನದ ಚಾಲಕನಿಗೆ ವಾಹನ ಚಾಲನೆ ವೇಳೆ ನಿದ್ದೆ ಸಮಸ್ಯೆ ಇದ್ದರೆ, ಈ ಸಾಧನವನ್ನು ಆನ್ ಮಾಡಬೇಕು. ಆಗ ಈ ಉಪಕರಣ ಆ್ಯಕ್ಟಿವ್ ಆಗುತ್ತದೆ. ಆ ಬಳಿಕ ಚಾಲಕ ವಾಹನದ ಸ್ಟೇರಿಂಗ್‌ ಅನ್ನು ಎರಡು ಕೈಗಳು ಹಿಡಿಯುವಲ್ಲಿ ಅಳವಡಿಸಿರುವ ರಿಮೋಟ್ ಬಟನ್‌ಗಳನ್ನು ಒತ್ತಬೇಕು ಎನ್ನುತ್ತಾರೆ ಪ್ರಭಾಕರ ಮೇಸ್ತ.

ಹೀಗೆ ಪ್ರತಿ ನಾಲ್ಕು ಸೆಕೆಂಡ್‌ಗೆ ಒಮ್ಮೆ ಬಟನ್‌ಗಳನ್ನು ಒತ್ತಬೇಕು. ಒಂದು ವೇಳೆ ಚಾಲಕ 4 ಸೆಕೆಂಡ್‌ನೊಳಗೆ ರಿಮೋಟ್ ಬಟನ್ ಒತ್ತದಿದ್ದರೆ (ಅಂದರೆ ಚಾಲಕ ನಿದ್ದೆಗೆ ಜಾರಿದ್ದಾನೆ ಎಂಬುದು ಅರ್ಥ), 5ನೇ ಸೆಕೆಂಡ್‌ಗೆ ವಾಹನದ ಇಂಜಿನ್ ತನ್ನಿಂತಾನೆ ಬಂದ್ ಆಗುತ್ತದೆ. ಅಲ್ಲದೇ, ಈ ಸಾಧನದ ಸೈರನ್ ಸಹ ಮೊಳಗಲಾರಂಭಿಸುತ್ತದೆ. ಇದರಿಂದ ಕೂಡಲೃ ಚಾಲಕ ಎಚ್ಚರಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಚಾಲಕ ಎಚ್ಚೆತ್ತುಕೊಂಡು ಮತ್ತೆ ಆತ ಆ ರಿಮೋಟ್ ಬಟನ್ ಒತ್ತಿದರೆ ಇಂಜಿನ್ ಆನ್ ಆಗುತ್ತದೆ. ಒಂದು ವೇಳೆ 4 ಸೆಕೆಂಡ್ ಬಳಿಕ ಇಂಜಿನ್ ಆಫ್ ಆದ ನಂತರವೂ ಚಾಲಕ ಎಚ್ಚರಗೊಳ್ಳದಿದ್ದಲ್ಲಿ ವಾಹನದ 4 ಕಡೆಗಳಲ್ಲಿರುವ ಇಂಡಿಕೇಟರ್ ಬ್ಲಿಂಕ್ ಆಗುತ್ತದೆ. ಅಷ್ಟೇ ಅಲ್ಲ, ಈ ಉಪಕರಣದ ಬ್ರೇಕ್ ಮೋಟರ್ ಆನ್ ಆಗುತ್ತದೆ. ಆ ಕ್ಷಣದಲ್ಲೇ ವಾಹನದ ಬ್ರೇಕ್ ಜಾಮ್ ಆಗಿ ಅಲ್ಲಿಗೆ ನಿಲ್ಲುತ್ತದೆ. ಇತ್ತ, ಸೈರನ್ ಕೂಡ ಮೊಳಗುವುದು ಮುಂದುವರಿಯುತ್ತದೆ. ಹೊರಗಡೆ ಇಂಡಿಕೇಟರ್ ಕೂಡಾ ಬ್ಲಿಂಕ್ ಆಗುತ್ತಿರುತ್ತದೆ. ಇದು ಉಳಿದ ವಾಹನಗಳ ಚಾಲಕರನ್ನು ಎಚ್ಚರಿಸಲು ಸಹಕಾರಿ ಆಗುತ್ತದೆ ಎಂದು ವಿವರಿಸಿದರು.

ಮನೆಗೆ ಕಳ್ಳರು ಬಂದರೆ, ಸೈರನ್ ಹೇಗೆ ಮೊಳಗುತ್ತದೆ?:ಇದೇ ರೀತಿಯಾಗಿ ಮನೆ ಕಳ್ಳತನ ತಡೆಯುವ ಮತ್ತೊಂದು ವಿಶಿಷ್ಟ ರೀತಿಯ ಉಪಕರಣವನ್ನೂ ಇವರು ತಯಾರಿಸಿದ್ದಾರೆ. ರಿಮೋಟ್ ಕಂಟ್ರೋಲ್ ಹೊಂದಿರುವ ಈ ಸಾಧನವು ಮನೆಗೆ ಕಳ್ಳರು ನುಗ್ಗಿದರೆ ಕೂಡಲೇ ಸೈರನ್ ಮೊಳಗಿಸಿ ಎಚ್ಚರಿಸುವ ಕೆಲಸ ಮಾಡುತ್ತದೆ. ಇದನ್ನು ತಮ್ಮ ಮನೆಗೆ ಅಳವಡಿಸಿಕೊಂಡು ಯಶಸ್ವಿ ಕೂಡ ಆಗಿದ್ದಾರೆ.

ಮನೆಗೆ ಬೀಗ ಹಾಕಿ ಹೋಗುವಾಗ ಮನೆಯವರು ಈ ಉಪಕರಣವನ್ನು ಆನ್ ಮಾಡಿ ಹೋಗಬೇಕು. ಈ ಅವಧಿಯಲ್ಲಿ ಯಾರಾದರೂ ಮನೆಯ ಬಾಗಿಲು ತೆರೆಯಲು ಯತ್ನಿಸಿದರೆ, ಈ ಉಪಕರಣ ನಿರಂತರ ಸೈರನ್ ಮೊಳಗಿಸಲಾರಂಭಿಸುತ್ತದೆ. ಒಂದು ವೇಳೆ, ಬೀಗ ಹಾಕಿದ ಮನೆ ಬಾಗಿಲಿಗೆ ಯಾರಾದರೂ ನೆಂಟರು, ಪೋಸ್ಟ್ ಮೆನ್ ಬಂದರೆ ಸಣ್ಣ ಪ್ರಮಾಣದ ಸಿಗ್ನಲ್ ಆಗುತ್ತದೆ. ಆದರೆ ಯಾರಾದರು ಬಾಗಿಲು ತೆಗೆಯುವ ಪ್ರಯತ್ನ ಮಾಡಿದರೆ ಆ ವೇಳೆ ಅಬ್ಬರದ ಸೈರನ್ ಮೊಳಗಲು ಆರಂಭವಾಗುತ್ತದೆ ಎಂದು ಪ್ರಭಾಕರ್ ಮೇಸ್ತ ತಿಳಿಸಿದರು.

ಕಳ್ಳರು ಹೆಂಚು ತೆಗೆದು, ಕಿಟಕಿ ಅಥವಾ ಹಿಂಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸಿದರೂ ಈ ಸೈರನ್ ಮೊಳಗುತ್ತದೆ. ಅದೇ ರೀತಿ ಮನೆಯಲ್ಲಿ ವೃದ್ಧರು ಒಬ್ಬರೇ ಇದ್ದಾಗ ಅಪಾಯವನ್ನುಂಟು ಮಾಡುವ ಯಾರಾದರೂ ಮನೆಗೆ ನುಗ್ಗಿದರೆ, ಮನೆಯಲ್ಲಿರುವವರು ಈ ಉಪಕರಣದ ರಿಮೋಟ್ ಬಟನ್ ಪ್ರೆಸ್ ಮಾಡಿದರೆ ಆಗಲೂ ಅದು ಮೊಳಗಿಸುತ್ತದೆ. ಬಳಿಕ ಮನೆಗೆ ನುಗ್ಗಿದವರು ಆ ವ್ಯಕ್ತಿಯಿಂದ ರಿಮೋಟ್ ಕಿತ್ತು ಮತ್ತೆ ಬಟನ್ ಒತ್ತಿದರೂ ಸೈರನ್ ನಿಲ್ಲುವುದಿಲ್ಲ. ಇದರಿಂದ ಅಕ್ಕಪಕ್ಕದ ಮನೆಯವರು ಎಚ್ಚೆತ್ತುಕೊಂಡು ಸಹಾಯಕ್ಕೆ ಧಾವಿಸಲು ಸಹಾಯವಾಗುತ್ತದೆ. ಗುಡುಗು ಸಿಡಿಲಿನಿಂದ ಈ ಉಪಕರಣಗಳು ಯಾವುದೇ ಹಾನಿಯಾಗುವುದಿಲ್ಲ. ಮನೆಯ ಉಪಕರಣ ತಯಾರಿಸಲು 10-12 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಸಣ್ಣ ರೈತರಿಗಾಗಿ ಕಡಿಮೆ ಬೆಲೆಯ ಕಾಂಪ್ಯಾಕ್ಟ್​ ಟ್ರ್ಯಾಕ್ಟರ್​ ತಯಾರಿಸಿದ ಸಿಎಸ್​ಐಆರ್​

ABOUT THE AUTHOR

...view details