ಉಡುಪಿ:ಮಹಿಳಾ ಮತದಾರರೇ ಹೆಚ್ಚಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಭ್ಯರ್ಥಿ ಗೆಲ್ಲಬೇಕಾದರೆ ಮಹಿಳೆಯರ ಶ್ರೀರಕ್ಷೆ ಬಹುಮುಖ್ಯ. ಇತರೆ ಕ್ಷೇತ್ರಗಳಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಏಪ್ರಿಲ್ 26ರಂದು ನಡೆಯಲಿದೆ. ನಿರೀಕ್ಷೆಯಂತೆ ಈ ಬಾರಿ ಬಿಜೆಪಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಹೋರಾಟ ನಡೆಸುತ್ತಿದೆ.
ಕ್ಷೇತ್ರದ ವಿಶೇಷತೆಗಳು:
- ಇಂದಿರಾ ಗಾಂಧಿಗೆ ಮರುಜನ್ಮ ನೀಡಿದ್ದ ಲೋಕಸಭಾ ಕ್ಷೇತ್ರ ಚಿಕ್ಕಮಗಳೂರು.
- ಅತೀ ಹೆಚ್ಚು ಕಾಫಿಯ ಸ್ವಾದವನ್ನು ವಿಶ್ವಕ್ಕೆ ಪಸರಿಸಿದ ಜಿಲ್ಲೆ ಚಿಕ್ಕಮಗಳೂರು.
- ಗಿರಿಶ್ರೇಣಿ, ಪ್ರವಾಸಿಸ್ಥಳ, ಧಾರ್ಮಿಕ ಸ್ಥಳವಿರುವ ಜಿಲ್ಲೆ ಚಿಕ್ಕಮಗಳೂರು.
- ಮೀನುಗಾರಿಕೆಯಲ್ಲಿ ಅತೀ ಹೆಚ್ಚು ಆದಾಯ ಹೊಂದಿರುವ ಸ್ಥಳ ಉಡುಪಿ
- ಕಡಲ ತೀರದ ಸೌಂದರ್ಯವನ್ನು ಸವಿಯೋಕೆ ಸಾವಿರಾರು ಜನರು ಆಗಮಿಸುವ ಸ್ಥಳ.
- ಮಲೆನಾಡು, ಕರಾವಳಿ ಎರಡೂ ಹೊಂದಿಕೊಂಡಿರುವ ಲೋಕಸಭಾ ಕ್ಷೇತ್ರ ಉಡುಪಿ-ಚಿಕ್ಕಮಗಳೂರು.
ಕ್ಷೇತ್ರ ರಚನೆ: 2002ರಲ್ಲಿ ಡಿಲಿಮಿಟೇಷನ್ ಕಮಿಷನ್ ಅಫ್ ಇಂಡಿಯಾ ಶಿಫಾರಸಿನಂತೆ 2008ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ರಚನೆಯಾಯಿತು. ಈ ಕ್ಷೇತ್ರದಿಂದ 2009ರಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಡಿ.ವಿ.ಸದಾನಂದ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡ ಆಯ್ಕೆಯಾದ ನಂತರ ಅವರು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2012ರ ಉಪಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ನಿಂದ ಗೆಲುವು ಸಾಧಿಸಿದರು. 2014 ಹಾಗೂ 2019 ಸತತವಾಗಿ ಪ್ರಸ್ತುತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧಿಸಿ ಬಿಜೆಪಿಯಿಂದ ಎರಡು ಬಾರಿಯೂ ದಾಖಲೆಯ ಗೆಲುವು ಸಾಧಿಸಿದ್ದರು. ಬಿಜೆಪಿಯ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಲಾ 4 ಸ್ಥಾನ ಪಡೆದು ಕಾಂಗ್ರೆಸ್, ಬಿಜೆಪಿ ಶಾಸಕರ ಸಮಬಲ ಹೊಂದಿದ್ದಾರೆ.
ಜಾತಿವಾರು ವಿವರ:ಮೊಗವೀರ 1,14,000, ಬಿಲ್ಲವ ಈಡಿಗರು, 1,90,000, ಲಿಂಗಾಯಿತ 1,02,000, ಬಂಟರು-ಶೆಟ್ಟಿ-ಒಕ್ಕಲಿಗ 1,80,000, ಬ್ರಾಹ್ಮಣ 1,18,454, ಮುಸ್ಲಿಂ 1,45,250, ಕ್ರಿಶ್ಚಿಯನ್ 80,500, ಪರಿಶಿಷ್ಟಜಾತಿ 2,10,580, ಪರಿಶಿಷ್ಟ ಪಂಗಡ 55,067, ಜೈನ 9,650, ಕೊಂಕಣಿ 10,240, ದೇವಾಡಿಗ 28,000, ಗಾಣಿಗ 14,570, ಕೊಂಕಣಿ ಖಾರ್ವಿ 67,345, ಕುರುಬರು 67,345, ಇತರೆ 68,700 ಸಂಖ್ಯಾಬಲ ಹೊಂದಿದೆ.
ಮೊಗವೀರ | 1,14,000 |
ಬಿಲ್ಲವ ಈಡಿಗರು | 1,90,000 |
ಲಿಂಗಾಯಿತ | 1,02,000 |
ಬಂಟರು-ಶೆಟ್ಟಿ-ಒಕ್ಕಲಿಗ | 1,80,000 |
ಬ್ರಾಹ್ಮಣ | 1,18,454 |
ಮುಸ್ಲಿಂ | 1,45,250 |
ಕ್ರಿಶ್ಚಿಯನ್ | 80,500 |
ಪರಿಶಿಷ್ಟಜಾತಿ | 2,10,580 |
ಪರಿಶಿಷ್ಟ ಪಂಗಡ | 55,067 |
ಜೈನ | 9,650 |
ಕೊಂಕಣಿ | 10,240 |
ದೇವಾಡಿಗ | 28,000 |
ಗಾಣಿಗ | 14,570 |
ಕೊಂಕಣಿ ಖಾರ್ವಿ | 67,345 |
ಕುರುಬರು | 67,345 |
ಇತರೆ | 68,700 |
ಕಳೆದ ನಾಲ್ಕು ಚುನಾವಣೆಯ ವಿವರ:2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶೋಭಾ ಕರಂದ್ಲಾಜೆ 7,18,916 ಪಡೆದು ಗೆಲುವು ಕಂಡರು. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಪ್ರಮೋದ್ ಮಧ್ವರಾಜ್ 3,69,317 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದರು. ಸೋಲಿನ ಅಂತರ 3,49,599 ಮತಗಳು.