ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಬೆಂಗಳೂರು: ಯುವತಿಯ ಕಾರು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದಡಿ ಇಬ್ಬರನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇಗೂರು ಮೂಲದ ಮಹಿಳೆ ನೀಡಿದ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೃತ್ಯದಲ್ಲಿ ಮತ್ತೋರ್ವ ಭಾಗಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಸದ್ಯ ಪೊಲೀಸ್ ವಶದಲ್ಲಿರುವ ಜಗನ್ನಾಥ್ ಹಾಗೂ ತೇಜಸ್ ಎಂಬುವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಘಟನೆಯ ವಿವರ:ಕಾರ್ಯನಿಮಿತ್ತ ನಿನ್ನೆ ರಾತ್ರಿ ಸೇಂಟ್ ಜಾನ್ ಆಸ್ಪತ್ರೆಗೆ ಬಂದಿದ್ದ ಮಹಿಳೆಯು ಬೇಗೂರಿನಲ್ಲಿರುವ ತಮ್ಮ ಮನೆಗೆ ಹಿಂತಿರುಗುವಾಗ ಕೋರಮಂಗಲ ಬಳಿ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕಿಡಿಗೇಡಿಗಳು ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮಡಿವಾಳದವರೆಗೂ ಫಾಲೋ ಮಾಡಿಕೊಂಡು ಬಂದಿದ್ದರಿಂದ ಆತಂಕಗೊಂಡ ಮಹಿಳೆ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಮಹಿಳೆ ನೀಡಿದ ದೂರನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ವೇಳೆ ಮಹಿಳೆಯು ತಮ್ಮ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾರೆ. ಹೀಗಾಗಿ ಕಾರು ಫಾಲೋ ಮಾಡಿರುವುದಾಗಿ ಪೊಲೀಸರ ಮುಂದೆ ಇಬ್ಬರು ಹೇಳಿಕೆ ನೀಡಿದ್ದಾರೆ. ಮಾಹಿತಿ ಆಧರಿಸಿ ಮಹಿಳೆ ಹಾಗೂ ಆರೋಪಿತರ ಸ್ಕೂಟರ್ ಪರಿಶೀಲಿಸಲಾಗಿದ್ದು, ಡಿಕ್ಕಿಹೊಡೆದಿರುವ ಕುರುಹುಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ:ಪ್ರಕರಣ ಸಂಬಂಧ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಮಾತನಾಡಿ, ''ನಿನ್ನೆ ರಾತ್ರಿ 9.15ರ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ಯುವತಿಯರು ಮಡಿವಾಳದಿಂದ ಕೋರಮಂಗಲ ಕಡೆಗೆ ಹೋಗಿದ್ದರು. ಈ ವೇಳೆ ಸಿಗ್ನಲ್ನಲ್ಲಿ ಇಂಡಿಕೇಟರ್ ಹಾಕುವ ವಿಚಾರಕ್ಕೆ ಪರಸ್ಪರ ವಾಗ್ವಾದ ಆಗಿದೆ. ಆಮೇಲೆ ಕಾರು ಚೇಸ್ ಮಾಡಿ ಕಿರುಕುಳ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ರಾತ್ರಿಯೇ ಎಫ್ಐಆರ್ ದಾಖಲಿಸಿ, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಹಿನ್ನೆಲೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಯಾರಿಗಾದರೂ ಈ ರೀತಿಯ ಘಟನೆ ನಡೆದರೆ, ಪೊಲೀಸ್ ಕಂಟ್ರೋಲ್ ರೂಮ್ 112 ನಂಬರ್ಗೆ ಕಾಲ್ ಮಾಡಿ ತಿಳಿಸಿ. ಈ ಘಟನೆಯಲ್ಲಿ ಮತ್ತೋರ್ವ ಆರೋಪಿಯ ಬಗ್ಗೆ ಹುಡುಕಾಟ ನಡೆಸುತ್ತಿದ್ದೇವೆ'' ಎಂದರು.
ಇದನ್ನೂ ಓದಿ:ಕರ್ಕಶ ಶಬ್ಧ ಮಾಡುವ ಬೈಕ್ ಸೈಲೆನ್ಸರ್ ಸದ್ದಡಗಿಸಿದ ಹುಬ್ಬಳ್ಳಿ ಪೊಲೀಸರು; ರೋಡ್ ರೋಲರ್ನಿಂದ ಪುಡಿ ಪುಡಿ - BIKE SILENCER
ಅಡ್ಡಾದಿಡ್ಡಿ ವಾಹನ ಚಾಲನೆ:ಮತ್ತೊಂದು ಪ್ರಕರಣದಲ್ಲಿ ಅಜಾಗರೂಕತೆ ಹಾಗೂ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿ ಎರಡು ಕಾರುಗಳಿಗೆ ಡ್ಯಾಮೇಜ್ ಮಾಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಒಂದೇ ವಾಹನದಲ್ಲಿ ಮೂವರು ಅಪ್ರಾಪ್ತರು ಪ್ರಯಾಣಿಸಿದ್ದಾರೆ. ಅಪ್ರಾಪ್ತರಿಗೆ ವಾಹನ ನೀಡದಂತೆ ಪೋಷಕರು ಹಾಗೂ ವಾಹನದ ಮಾಲೀಕರಿಗೆ ಸಂಚಾರ ಪೊಲೀಸರು ತಿಳಿವಳಿಕೆ ಮೂಡಿಸಿದ್ದರೂ, ಪೋಷಕರ ನಿರ್ಲಕ್ಷ್ಯದ ಪರಿಣಾಮ ಘಟನೆ ಸಂಭವಿಸಿದೆ. ಅಜಾಗರೂಕವಾಗಿ ವಾಹನ ಚಾಲನೆಯ ದೃಶ್ಯ ಕಾರೊಂದರ ಡ್ಯಾಷ್ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಟ್ರಾಫಿಕ್ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.