ಚಿಕ್ಕಮಗಳೂರು:ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎನ್.ಆರ್.ಪುರ ತಾಲೂಕಿನ ಕರಗುಂದ ಗ್ರಾಮದಲ್ಲಿ ನಡೆದಿದೆ. ಹೊರನಾಡು ಗ್ರಾಮದ ಉಮೇಶ್, ಮುಂಡುಗದ ಮನೆ ಗ್ರಾಮದ ಸುನಿಲ್ ಮೃತಪಟ್ಟ ಯುವಕರು.
ಉಮೇಶ್, ಸುನೀಲನನ್ನು ಶಿವಮೊಗ್ಗಕ್ಕೆ ಬಿಡಲು ಬೈಕ್ನಲ್ಲಿ ಹೋಗುತ್ತಿದ್ದರು. ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೇ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಎನ್.ಆರ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಎನ್.ಆರ್ ಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ಟೈರ್ ಸಿಡಿದು ಇಬ್ಬರ ಸಾವು(ದಾವಣಗೆರೆ): ಮತ್ತೊಂದೆಡೆ, ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು ಸೇತುವೆ ಮೇಲಿಂದ ಕಾರು ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ದಾವಣೆಗೆರೆ ತಾಲೂಕಿನ ಹುಣಸೇಕಟ್ಟೆ ಬಳಿ ಭಾನುವಾರ ನಡೆದಿದೆ. ಹರಿಹರ ತಾಲೂಕಿನ ಸಾರಥಿ ಗ್ರಾಮದ ನಿವಾಸಿ ಕೊಟ್ರೇಶಪ್ಪ (60), ಹುಬ್ಬಳ್ಳಿ ಮೂಲದ ಈರಮ್ಮ (54) ಮೃತರು. ಕಾರಿನಲ್ಲಿದ್ದ ಪುಷ್ಪಾ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ದಾವಣಗೆರೆಯ ಕೆಎಚ್‌ಬಿ ಕಾಲೊನಿಯ ನಿವಾಸಿಯಾದ ಕೊಟ್ರೇಶಪ್ಪ ಅವರು ಮದುವೆ ಮುಗಿಸಿಕೊಂಡು ಈರಮ್ಮ ಅವರ ಜೊತೆ ತೆರಳುತ್ತಿದ್ದಾಗ ಅಪಘಾತವಾಗಿದೆ. ಗಾಯಗೊಂಡ ಇತರರನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾರ-ಬೈಕ್ ಮಧ್ಯೆ ಭೀಕರ ರಸ್ತೆ ಅಪಘಾತ, ಇಬ್ಬರು ಸಾವು - HORRIBLE ACCIDENT