ಹಾಸನ:ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್ ಡಿ ರೇವಣ್ಣರ ಆಪ್ತ ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಹತ್ಯೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದ ಐದೂವರೆ ತಿಂಗಳ ಬಳಿಕ A1 ಆರೋಪಿ ಯೋಗಾನಂದ ಹಾಗೂ A2 ಆರೋಪಿ ಅನಿಲ್ ಎಂಬುವರ ಬಂಧನವಾಗಿದೆ.
2023ರ ಆಗಸ್ಟ್ 9 ರಂದು ಹಾಸನ ಕೆಐಡಿಬಿ ಏರಿಯಾದಲ್ಲಿನ ಫ್ಯಾಕ್ಟರಿ ಮುಂಭಾಗ ಕೃಷ್ಣೇಗೌಡರ ಹತ್ಯೆಯಾಗಿತ್ತು. ಆರಂಭದಲ್ಲಿ ಹಾಸನ ಹಾಗೂ ತುಮಕೂರು ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಕಳೆದ ಐದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಯೋಗಾನಂದ ಹಾಗೂ ಅನಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ, ''ತುಮಕೂರಿನ ತುರುವೇಕೆರೆ ಸಮೀಪದ ದಬ್ಬೆಗಟ್ಟದ ತೋಟದ ಮನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ಯೋಗಾನಂದ ಹಾಗೂ ಅನಿಲ್ ತರಕಾರಿ ವ್ಯಾಪಾರ, ಡ್ರೈವಿಂಗ್, ದೇವಸ್ಥಾನಗಳ ಅಕ್ಕಪಕ್ಕದಲ್ಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಎರಡು ಬಾರಿ ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ತುಮಕೂರು, ಚಿಕ್ಕಬಳ್ಳಾಪುರ ಸೇರಿ ಬೇರೆ ರಾಜ್ಯದ ಗಡಿಭಾಗಗಳಲ್ಲಿ ಮನೆ ಮಾಡಿಕೊಂಡಿರುತ್ತಿದ್ದರು'' ಎಂದು ತಿಳಿಸಿದ್ದಾರೆ.