ಹುಬ್ಬಳ್ಳಿ:ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಬ್ಯಾಂಕ್ ಉದ್ಯೋಗಿಯಿಂದ 27.78 ಲಕ್ಷ ರೂ.ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಗೋಕುಲ ರಸ್ತೆ ನಿವಾಸಿ ಸೋಮಶೇಖರ್ ಪಂಗುಂದಿ ವಂಚನೆಗೊಳಗಾದವರು.
ಅಪರಿಚಿತ ವ್ಯಕ್ತಿ ನಕಲಿ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದ ಲಿಂಕ್ ಅನ್ನು ಸೋಮಶೇಖರ್ ಕ್ಲಿಕ್ ಮಾಡಿದ್ದಾರೆ. ಬಳಿಕ ಆರೋಪಿ ಅವರ ಮೊಬೈಲ್ ಸಂಖ್ಯೆಯನ್ನು ವಾಟ್ಸ್ಆ್ಯಪ್ ಗ್ರೂಪ್ವೊಂದಕ್ಕೆ ಸೇರಿಸಿ ಹಣ ಹೂಡುವಂತೆ ಪ್ರೇರೇಪಿಸಿದ್ದಾನೆ. ಆರಂಭದಲ್ಲಿ ಸೋಮಶೇಖರ್ ಅವರಿಂದ ಹಣ ವರ್ಗಾಯಿಸಿಕೊಂಡು ಲಾಭ ನೀಡಿದ್ದಾನೆ. ಬಳಿಕ ಖಾಸಗಿ ಬ್ಯಾಂಕ್‌ನಿಂದ 8.50 ಲಕ್ಷ ರೂ. ಮತ್ತೊಂದು ಬ್ಯಾಂಕ್‌ನಿಂದ 17 ಲಕ್ಷ ರೂ ಹಾಗೂ 2.28 ಲಕ್ಷ ರೂ.ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಗೆ 6.11 ಲಕ್ಷ ರೂ ವಂಚನೆ: ಮತ್ತೊಂದು ಪ್ರಕರಣದಲ್ಲಿ ರೆಸ್ಟೋರೆಂಟ್‌ಗಳಿಗೆ ರೇಟಿಂಗ್ ನೀಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 6.11 ಲಕ್ಷ ರೂ ವಂಚಿಸಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಜನತಾ ಕ್ವಾರ್ಟರ್ಸ್ ನಿವಾಸಿ ಮುನಿಗೆಟ್ಟಿ ಬ್ಯೂಲಾ ವಂಚನೆಗೊಳಗಾದವರು. ವಾಟ್ಸ್ಆ್ಯಪ್ ಮೂಲಕ ಮುನಿಗೆಟ್ಟಿ ಅವರನ್ನು ಸಂಪರ್ಕಿಸಿರುವ ಅಪರಿಚಿತ ವ್ಯಕ್ತಿ, ಆರಂಭದಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾನೆ. ಬಳಿಕ ಟೆಲಿಗ್ರಾಂ ಆ್ಯಪ್‌ನಲ್ಲಿ ಕೆಲವು ಟಾಸ್ಕ್‌ಗಳನ್ನು ನೀಡಿ ಅವರ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಘಟನೆ ಸಂಬಂಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.