ಬೆಂಗಳೂರು : ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದು ಒಂದೇ ದಿನ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಶನಿವಾರ ನಗರದಲ್ಲಿ ವರದಿಯಾಗಿವೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಲ್ಲಿಕಾರ್ಜುನ (25) ಹಾಗೂ ಮತ್ತೊಂದೆಡೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ. ಶಿವಕುಮಾರ್ ಗುಣಾರೆ ಮಾತನಾಡಿ, ''ವಿಜಯನಗರ ಮೂಲದ ಮಲ್ಲಿಕಾರ್ಜುನ ಖಾಸಗಿ ಆಸ್ಪತ್ರೆಯೊಂದಲ್ಲಿ ವೈದ್ಯಕೀಯ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ. ನಾಲ್ಕು ವರ್ಷಗಳಿಂದ ಆನ್‌ಲೈನ್ ಗೇಮ್ಸ್ ಆಡುವ ಹವ್ಯಾಸ ಹೊಂದಿದ್ದ ಮಲ್ಲಿಕಾರ್ಜುನ, ಸಾಕಷ್ಟು ಹಣವನ್ನ ಗೇಮಿಂಗ್ ಆ್ಯಪ್‌ನಲ್ಲಿ ಕಳೆದುಕೊಂಡಿದ್ದ. ಕೊನೆಗೆ ಆರ್ಥಿಕ ಸಂಕಷ್ಟ ತಾಳಲಾರದೆ ಶನಿವಾರ ತನ್ನ ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ' ಎಂದು ತಿಳಿಸಿದರು.