ಕರ್ನಾಟಕ

karnataka

ETV Bharat / state

ದಾವಣಗೆರೆ: ಶಾಲೆಗೆ ರಜೆ ಹಿನ್ನೆಲೆ ಈಜಲು ತೆರಳಿದ್ದ ಇಬ್ಬರು ಮಕ್ಕಳು ನೀರುಪಾಲು - BOYS DROWN

ಈಜಲು ತೆರಳಿದ್ದ ಇಬ್ಬರು ಸ್ನೇಹಿತರು ನೀರುಪಾಲಾದ ಘಟನೆ ದಾವಣಗೆರೆ ಜಿಲ್ಲೆಯ ಕುರ್ಕಿ ಗ್ರಾಮದ ಬಳಿಯ ಭದ್ರಾ ನಾಲೆಯಲ್ಲಿ ಸಂಭವಿಸಿದೆ.

ಭದ್ರಾ ನಾಲೆ, ಮಕ್ಕಳು ನೀರುಪಾಲು
ಭದ್ರಾ ನಾಲೆ (ETV Bharat)

By ETV Bharat Karnataka Team

Published : Feb 3, 2025, 7:25 AM IST

ದಾವಣಗೆರೆ:ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಮಕ್ಕಳು ಸಾವನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಕೂಗಳತೆಯಲ್ಲಿ ಹರಿಯುವ ಭದ್ರಾ ನಾಲೆಯಲ್ಲಿ ಘಟನೆ ನಡೆದಿದೆ. ಕುರ್ಕಿ ಗ್ರಾಮದ ಪಾಂಡು (16) ಹಾಗೂ ತುರ್ಚಘಟ್ಟ ಗ್ರಾಮದ ಯತೀಂದ್ರ (16) ಮೃತಪಟ್ಟ ಮಕ್ಕಳೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಶಾಲೆಗೆ ರಜೆ ಹಿನ್ನೆಲೆ ಈಜಲು ಬಂದಿದ್ದ ಮಕ್ಕಳು:ಮೃತ ಮಕ್ಕಳಿಬ್ಬರು ದೂರದ ತುರ್ಚಘಟ್ಟ ಗ್ರಾಮದ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ಸ್ನೇಹಿತರಾಗಿದ್ದು ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಕುರ್ಕಿ ಗ್ರಾಮದ ಮುಖ್ಯ ಕಾಲುವೆಯಲ್ಲಿ ಈಜಲು ಬಂದಿದ್ದರು. ಈ ವೇಳೆ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರಿಂದ ಸಾಂತ್ವನ:ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಓರ್ವ ಬಾಲಕನ ಶವ ಪತ್ತೆ, ಮತ್ತೋರ್ವನಿಗಾಗಿ ಶೋಧ: ಕುರ್ಕಿ ಗ್ರಾಮದ ಪಾಂಡು ಮೃತದೇಹ ಪತ್ತೆಯಾಗಿದ್ದು, ತುರ್ಚಘಟ್ಟ ಗ್ರಾಮದ ಯತೀಂದ್ರನಿಗಾಗಿ ಶೋಧ ಕಾರ್ಯ ನಡೆದಿದೆ. ಹದಡಿ ಪೊಲೀಸರು ನುರಿತ ಈಜುಪಟುಗಳ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಗುರುಕುಲ ವಸತಿ ಶಾಲೆಯಲ್ಲಿ ಈ ಬಾಲಕರು ಎಸ್​ಎಸ್​ಎಲ್​ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಇಬ್ವರು ಕುರ್ಕಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಗ್ರಾಮದ ಬಳಿ ಹರಿಯುತ್ತಿರುವ ದೊಡ್ಡದಾದ ಭದ್ರಾ ಕಾಲುವೆಯಲ್ಲಿ ಇಬ್ಬರೂ ಈಜಲು ನೀರಿಗಿಳಿದಿದ್ದರು. ಮೊದಲು ಪಾಂಡು ಕಾಲುವೆಗೆ ಜಿಗಿದು ಈಜಿದ್ದಾನೆ. ನಂತರ ಯತೀಂದ್ರ ನೀರಿಗೆ ಜಿಗಿದಿದ್ದಾನೆ. ಆದರೆ ಯತೀಂದ್ರನಿಗೆ ಈಜು ಬಾರದ ಕಾರಣ ನೀರಲಿ ಮುಳುಗಿತ್ತಿದ್ದ. ಆತ ರಕ್ಷಣೆಗೆ ಪಾಂಡು ಮುಂದಾಗಿದ್ದ. ಆದರೇ ಇಬ್ಬರೂ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.

ಬಾಲಕರು ನೀರಿಗಿಳಿದ ಸಮೀಪವೇ ಕಾಲುವೆಗೆ ಗೇಟ್​​ಗಳಿವೆ. ಈ ಗೇಟ್ ಬಳಿ ಪಾಂಡು ಮೃತದೇಹ ಪತ್ತೆಯಾಗಿದೆ. ಯತೀಂದ್ರನಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಹದಡಿ ಪೋಲಿಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದ್ವಿಚಕ್ರ ವಾಹನದಲ್ಲಿ ಹಿಂಬದಿ ಕೂರುವ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಕೋರಿ ಅರ್ಜಿ: ವಿವರಣೆ ಕೇಳಿದ ಹೈಕೋರ್ಟ್

ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್; 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ

ABOUT THE AUTHOR

...view details