ಮಂಗಳೂರು (ದಕ್ಷಿಣ ಕನ್ನಡ) : ಪತ್ನಿ ಮತ್ತು ಮಗುವನ್ನು ಕೊಂದು ಕಾರ್ತಿಕ್ ಭಟ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ತಿಕ್ ಭಟ್ ಅವರ ತಾಯಿ ಮತ್ತು ಅಕ್ಕನನ್ನು ಬಂಧಿಸಿದ್ದಾರೆ. ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಮತ್ತು ಅಕ್ಕ ಕಣ್ಮಣಿ ಬಂಧನಕ್ಕೊಳಗಾದವರು.
ಪಕ್ಷಿಕೆರೆಯ ಕಾರ್ತಿಕ್ ಭಟ್, ತನ್ನ ಪತ್ನಿ ಪ್ರಿಯಾಂಕಾ ಮತ್ತು ಹೃದಯ್(4)ನನ್ನು ತಮ್ಮ ಮನೆಯಲ್ಲಿ ಹತ್ಯೆ ಮಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಈ ಬಗ್ಗೆ ಪ್ರಿಯಾಂಕಾ ತಾಯಿ ಸಾವಿತ್ರಿ ನೀಡಿದ ದೂರು ಹೀಗಿದೆ : ಮಗಳು ಪ್ರಿಯಾಂಕಳನ್ನು ದಿನಾಂಕ 14-11-2018 ರಂದು ಉಡುಪಿಯ ಶ್ರೀ ಕೃಷ್ಣ ಭವನದಲ್ಲಿ ಪಕ್ಷಿಕೆರೆ ವಾಸಿ ಜರ್ನಾಧನ ಭಟ್ ಅವರ ಮಗ ಕಾರ್ತಿಕ ಭಟ್ ಅವರಿಗೆ ಮದುವೆ ಮಾಡಿಕೊಟ್ಟಿದ್ದು, ಇವರಿಗೆ 4 ವರ್ಷ ಪ್ರಾಯದ ಗಂಡು ಮಗುವಿದ್ದು, ಪ್ರಿಯಾಂಕ ಮತ್ತು ಕಾರ್ತಿಕ್ ಅವರು ಜೀವನದಲ್ಲಿ ಅನೋನ್ಯವಾಗಿದ್ದರು.
ಮದುವೆಯಾದ ಪ್ರಾರಂಭದಲ್ಲಿ ಕಾರ್ತಿಕ್ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಆತನು ಊರಿಗೆ ಬಂದ ನಂತರ ಕಾರ್ತಿಕ್ ಆತನ ತಂದೆಯ ಅಸೌಖ್ಯ ಇರುವುದರಿಂದ ಪಕ್ಷಿಕೆರೆಯಲ್ಲಿ ತಂದೆ-ತಾಯಿ ಜೊತೆ ವಾಸಮಾಡಿಕೊಂಡಿದ್ದನು.
ಸದ್ರಿ ವಾಸ ಮಾಡಿಕೊಂಡಿರುವ ಮನೆಯು ಕಾರ್ತಿಕನ ಅಕ್ಕ ಕಣ್ಮಣಿ ಅವರ ಗಂಡ ಗುರುಪ್ರಸಾದ ಎಂಬವರ ಮಾಲೀಕತ್ವದ ವಸತಿ ಸಮುಚ್ಛಯದಲ್ಲಿದ್ದು, ಮನೆಯನ್ನು ಕಾರ್ತಿಕನ ತಂದೆಯ ಹೆಸರಿನಲ್ಲಿ ಖರೀದಿಸಿರುವುದಾಗಿ ಹೇಳಿ ಕಾರ್ತಿಕನು ವಿದೇಶದಲ್ಲಿದ್ದ ವೇಳೆ ಹಣವನ್ನು ಪಡೆದುಕೊಂಡಿರುತ್ತಾರೆ.
ಮನೆಯ ಲೋನ್ ಕೂಡ ಕಾರ್ತಿಕ್ ಕಟ್ಟುತ್ತಿದ್ದರು. ಸದ್ರಿ ಮನೆಯು ಕಾರ್ತಿಕನ ಅಕ್ಕ ಕಣ್ಮಣಿ ಮತ್ತು ಆಕೆಯ ಗಂಡನಿಗೆ ಸೇರಿದ್ದು ಎಂಬುದಾಗಿ ಕಾರ್ತಿಕನ ಅಮ್ಮ ಶ್ಯಾಮಲಾರವರು ಎಲ್ಲರಲ್ಲಿ ಹೇಳುತ್ತ ಕಾರ್ತಿಕನಿಗೆ ಮಾನಸಿಕ ಕಿರಿಕಿರಿ ಮಾಡುತ್ತಿದ್ದ ಬಗ್ಗೆ ಕಾರ್ತಿಕನು ಫಿರ್ಯಾದಿದಾರರಲ್ಲಿ ತಿಳಿಸಿದ್ದು, ಅಲ್ಲದೇ, ಕಣ್ಮಣಿ ಹೇಳಿದ ಹಾಗೆ ಶ್ಯಾಮಲಾ ಅವರು ಕೇಳುತ್ತಾ ಮಗಳು ಪ್ರಿಯಾಂಕ ಹಾಗೂ ಅಳಿಯ ಕಾರ್ತಿಕ್ನನ್ನು ಮನೆಯಿಂದ ಹೊರಗೆ ಹೋಗುವಂತೆ, ಬೇರೆ ಮನೆ ಮಾಡುವಂತೆ ಹಾಗೂ ಪ್ರಿಯಾಂಕಳನ್ನು ಕೆಲಸಕ್ಕೆ ಹೋಗಬೇಕು, ಕಾರ್ತಿಕನು ವಿದೇಶಕ್ಕೆ ಹೋಗಬೇಕು ಎಂದು ತಿಳಿಸುತ್ತಿದ್ದರು.
ಆದರೆ, ಕಾರ್ತಿಕನಿಗೆ ಪ್ರಿಯಾಂಕಾ ಕೆಲಸಕ್ಕೆ ಹೋಗುವ ಇಷ್ಟವಿಲ್ಲದೇ ಕಳೆದ ಎರಡು ವರ್ಷಗಳ ಹಿಂದೆ ಪ್ರಿಯಾಂಕ ಹಾಗೂ ಅಳಿಯ ಕಾರ್ತಿಕ ಮನೆಯಲ್ಲಿ ಬೇರೆ ಅಡುಗೆ ಮಾಡಿಕೊಂಡಿದ್ದ. ಇದರಿಂದ ಕಾರ್ತಿಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿರುವ ಮೇರೆಗೆ ದಿನಾಂಕ : 09-11-2024 ರಂದು ಪಕ್ಷಿಕೆರೆಯ ಪ್ರಿಯಾಂಕ ಹಾಗೂ ಕಾರ್ತಿಕ ವಾಸವಾಗಿರುವ ಮನೆಗೆ ಬಂದಾಗ ಪ್ರಿಯಾಂಕ ಹಾಗೂ ಆಕೆಯ ಮಗ ಕೊಲೆ ಮಾಡಲ್ಪಟ್ಟ ಸ್ದಿತಿಯಲ್ಲಿ ಕಂಡು ಬಂದಿದ್ದು, ಕಾರ್ತಿಕನಿಗೆ ಆತನ ಅಕ್ಕ ಕಣ್ಮಣಿ ಹಾಗೂ ಆತನ ಅಮ್ಮ ಶ್ಯಾಮಲಾ ಅವರು ಸೌಜನ್ಯಕ್ಕಾದರೂ ಗೌರವಿಸದೇ, ಮಾನಸಿಕ ಕಿರಿಕಿರಿ, ಕಿರುಕುಳ ನೀಡಿದ ಪರಿಣಾಮ ಕಾರ್ತಿಕನು ಪ್ರಿಯಾಂಕ ಮತ್ತು ಮಗನನ್ನ ಕೊಲೆ ಮಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಕಾರ್ತಿಕನು ಡೆತ್ನೋಟ್ನಲ್ಲಿ ಕೂಡ ಬರೆದಿದ್ದಾರೆ‘‘ ಎಂದು ದೂರಿನಲ್ಲಿ ತಿಳಿಸಿದ್ದರು. ಈ ದೂರಿನ ಹಿನ್ನೆಲೆ ಕಾರ್ತಿಕ್ ಭಟ್ನ ತಾಯಿ ಮತ್ತು ಅಕ್ಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ :ಮಂಗಳೂರು: ಪತ್ನಿ, ಮಗು ಕೊಂದು ವ್ಯಕ್ತಿ ಆತ್ಮಹತ್ಯೆ