ಬೆಂಗಳೂರು: ಹೆಣ್ಣು ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗ ಪತ್ತೆಗೆ ಬಳಸುವ ಸ್ಕ್ಯಾನಿಂಗ್ ಮಷಿನ್‌ಗಳನ್ನು ಸರಬರಾಜು ಮಾಡಿದ್ದ ಮಂಗಳೂರಿನ ಖಾಸಗಿ ಕಂಪನಿಯೊಂದರ ಮಾಲೀಕ ಲಕ್ಷ್ಮಣ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಸ್ಕ್ಯಾನಿಂಗ್ ಯಂತ್ರ ಪಡೆದಿದ್ದ ಸಿದ್ದೇಶ್ ಎಂಬಾತನನ್ನು ಸಹ ಬಂಧಿಸಲಾಗಿದೆ.
ಆರೋಪಿಯು PCPNDT (Pre-Conception and Pre-Natal Diagnostic Techniques Act)ರ ಅಡಿ ಅಗತ್ಯ ಸಾಮಗ್ರಿಗಳ ಖರೀದಿ ಮತ್ತು ರಿಪೇರಿ ಮಾಡುವ ಪರವಾನಗಿಯನ್ನ ಹೊಂದಿದ್ದ. 3 ಸ್ಕ್ಯಾನಿಂಗ್ ಮಷಿನ್‌ಗಳನ್ನು ಅಕ್ರಮವಾಗಿ ಪ್ರಕರಣದ ಇನ್ನೊಬ್ಬ ಆರೋಪಿಯಾಗಿರುವ ಆಯುರ್ವೇದಿಕ್ ವೈದ್ಯ ಮಲ್ಲಿಕಾರ್ಜುನನಿಗೆ ನೀಡಿದ್ದ. ಆರೋಪಿ ಮಲ್ಲಿಕಾರ್ಜುನ ಆ 3 ಮಷಿನ್‌ಗಳನ್ನು ಅಕ್ರಮವಾಗಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುವ ಜಾಲದ ಆರೋಪಿತರಿಗೆ ಸರಬರಾಜು ಮಾಡಿದ್ದ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಸ್ಕ್ಯಾನಿಂಗ್ ಯಂತ್ರಗಳನ್ನು ಜಪ್ತಿ ಮಾಡಲಾಗಿದೆ.