ಕರ್ನಾಟಕ

karnataka

ETV Bharat / state

57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಜಗಳೂರು ಕೆರೆಗಳಿಗೆ ಹರಿದ ತುಂಗಭದ್ರೆ, ರೈತರ ಮೊಗದಲ್ಲಿ ಸಂತಸವೋ ಸಂತಸ - FILLING WATER TO 57 LAKES PROJECT

ಜಗಳೂರು ತಾಲೂಕಿನ 46ಕ್ಕೂ ಹೆಚ್ಚು ಕೆರೆಗಳಿಗೆ ತುಂಗಭದ್ರಾ ನದಿನೀರು ಹರಿದು ಬಂದಿದ್ದು ರೈತರು ಸಂತಸಗೊಂಡಿದ್ದಾರೆ.

ಜಗಳೂರು ಕೆರೆಗಳಿಗೆ ಹರಿದ ತುಂಗಭದ್ರೆ
ಜಗಳೂರು ಕೆರೆಗಳಿಗೆ ಹರಿದ ತುಂಗಭದ್ರೆ (ETV Bharat)

By ETV Bharat Karnataka Team

Published : Nov 8, 2024, 5:41 PM IST

ದಾವಣಗೆರೆ:ಬರಪೀಡಿತ ಜಗಳೂರು ತಾಲೂಕಿಗೆ ನೀರು ಹರಿಸಿ ರೈತರ ಬಾಳು ಹಸನಾಗಿಸುವ ಮಹತ್ವದ '57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ'ಯಿಂದ ಸದ್ಯ 46ಕ್ಕೂ ಹೆಚ್ಚು ಕೆರೆಗಳು ತುಂಬಿವೆ. ಜಗಳೂರು ತಾಲೂಕಿನ ಒಟ್ಟು 57 ಕೆರೆಗಳ ಪೈಕಿ 46ಕ್ಕೂ ಹೆಚ್ಚು ಕೆರೆಗಳಿಗೆ ತುಂಗಭದ್ರಾ ನದಿ ನೀರು ಹರಿಸಲಾಗಿದೆ.‌ ಇನ್ನುಳಿದ ಕೆರೆಗಳಿಗೂ ಆದಷ್ಟು ಬೇಗ ನೀರು ಹರಿಸಿ ತುಂಬಿಸಲಾಗುತ್ತದೆ ಎಂದು ನೀರಾವರಿ ಇಲಾಖೆ ಮಾಹಿತಿ ನೀಡಿದೆ.

ಹಿರೇಮಲ್ಲನಹೊಳೆ, ಗುರುಸಿದ್ದಾಪುರ ಕೆರೆ , ಹೊಸಕೆರೆ, ಅಣಬೂರು ಕೆರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕೆರೆಗಳೂ ಕೋಡಿ ಬಿದ್ದಿವೆ. ಜಗಳೂರು ಟೌನ್, ಸಂಗೇನಹಳ್ಳಿ, ತುಪ್ಪದಹಳ್ಳಿ , ಗಡಿಮಾಕುಂಟೆ, ಕೆಳಗೋಟೆ, ಗೌರಿಪುರ, ಸೊಕ್ಕೆ, ಮಲ್ಲನಹೊಳೆ, ರಸ್ತೆಮಾಕುಂಟೆ ಗ್ರಾಮದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ಜಗಳೂರು ಕೆರೆಗಳಿಗೆ ಹರಿದ ತುಂಗಭದ್ರೆ (ETV Bharat)

ಹರಿಹರ ತಾಲೂಕಿನ ದೀಟೂರು ಗ್ರಾಮದ ಬಳಿ ಜಾಕ್​ವೆಲ್​ನಿಂದ ಜಗಳೂರು ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತದೆ.‌ 665 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಈಗಾಗಲೇ ಶೇ.80ರಷ್ಟು ಯೋಜನೆ ಮುಗಿಯುವ ಹಂತಕ್ಕೆ ತಲುಪಿದೆ. ಕೆರೆಗಳು ತುಂಬುತ್ತಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ರೈತ ಟಿ. ಹಾಲಪ್ಪ 'ಈಟಿವಿ ಭಾರತ' ಜೊತೆ ಮಾತನಾಡಿ, "ನಮ್ಮ ಕೆರೆಗೆ ನೀರು ಹರಿದು ಬರುತ್ತಿದ್ದು, ಕೆಲವೇ ದಿನಗಳಲ್ಲಿ ಕೆರೆ ಭರ್ತಿಯಾಗಲಿದೆ. ಬೋರ್​ವೆಲ್​ಗಳು ರಿಚಾರ್ಜ್ ಆಗುತ್ತಿವೆ. ಇದರಿಂದ ಅಡಕೆ ಬೆಳೆಗೆ ನೀರು ಕೊಡಲು ಉಪಯೋಗ ಆಗಲಿದೆ. ದಾಳಿಂಬೆ, ಪಪ್ಪಾಯಿ, ಮೆಕ್ಕೆಜೋಳ ಬಳೆಯಲು ಅನುಕೂಲವಾಗಲಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

ರಸ್ತೆಮಾಕುಂಟೆ ಗ್ರಾಮದ ರೈತ ಸ್ವಾಮಿ ಮಾತನಾಡಿ," ತುಂಗಭದ್ರಾ ನದಿಯಿಂದ ನೀರಿನಿಂದ ಕೆರೆ ತುಂಬುತ್ತಿದೆ. ಹಿಂದೆ ಸಾವಿರ ಅಡಿ ಆಳದ ಬೋರ್​ವೆಲ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಇದೀಗ 40 ರಿಂದ 50 ಅಡಿಗೆ ನೀರು ಸಿಗುತ್ತಿದೆ. ಅಡಕೆ, ತರಕಾರಿ ಬೆಳೆಗೆ ಅನುಕೂಲ ಆಗಲಿದೆ" ಎಂದು ಹೇಳಿದರು.

ಇದನ್ನೂ ಓದಿ:ಇಳಿದ 'ಬಿಳಿ ಬಂಗಾರ'ದ ಬೆಲೆ: ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಸುವಂತೆ ಸರ್ಕಾರಕ್ಕೆ ರೈತರ ಆಗ್ರಹ

ABOUT THE AUTHOR

...view details