ಕೊಪ್ಪಳ:ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್ ಗೇಟ್ನ ಚೈನ್ ಲಿಂಕ್ ಕಟ್ ಆಗಿರುವ ಕಾರಣದಿಂದಾಗಿ ಸ್ಟಾಪಲಾಗ್ ಅಳವಡಿಕೆ ಕಾರ್ಯ ಬಹುತೇಕ ಯಶಸ್ಸು ಕಂಡಿದ್ದು, ಎಲ್ಲಾ ಗೇಟ್ಗಳ ಮೂಲಕ ನದಿಗೆ ನೀರನ್ನು ಹರಿಬಿಡಲಾಗಿತ್ತು. ಇದೀಗ 19ನೇ ಗೇಟ್‌ಗೆ ಸ್ಟಾಪ್ಲಾಗ್ ಅಳವಡಿಸುವ ಕಾರ್ಯ ಯಶಸ್ವಿಯಾದ ಹಿನ್ನೆಲೆಯಲ್ಲಿ ಇನ್ನುಳಿದ ಎಲ್ಲ ಗೇಟ್ಗಳನ್ನು ಬಂದ್ ಮಾಡಲಾಗಿದೆ.
ಎಲಿಮೆಂಟ್ ಅಳವಡಿಕೆ ಯಶಸ್ವಿ (ETV Bharat) ಮೂರನೇ ಎಲಿಮೆಂಟ್ ಅಳವಡಿಕೆ ಯಶಸ್ವಿ:ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19ರಲ್ಲಿ ಶುಕ್ರವಾರ ಸಂಜೆ ಮೊದಲ ಎಲಿಮೆಂಟ್ ಕೂರಿಸಿ ಯಶಸ್ವಿಯಾಗಿದ್ದ ತಜ್ಞರ ತಂಡ ಶನಿವಾರ ಮಧ್ಯಾಹ್ನ ಹೊತ್ತಿಗೆ ಮೂರು ಎಲಿಮೆಂಟ್ಗಳನ್ನು ಯಶಸ್ವಿಯಾಗಿ ಅಳವಡಿಸಿತು. ಶನಿವಾರ ಬೆಳಗ್ಗೆ ಎರಡು ಎಲಿಮೆಂಟ್ಗಳನ್ನು ಅಣೆಕಟ್ಟೆ ಮೇಲೆ ತರಲಾಗಿತ್ತು. ಇಂದು ಒಟ್ಟು ಮೂರು ಎಲಿಮೆಂಟ್ ಅಳವಡಿಸಿ ಜಲಾಶಯದಿಂದ ಪೋಲಾಗಿ ಹರಿಯುತ್ತಿದ್ದ ನೀರನ್ನು ಉಳಿಸಲಾಗಿದೆ. ಇದರಿಂದಾಗಿ 90 ಟಿಎಂಸಿ ನೀರು ಉಳಿಯಲಿದೆ ಎಂದು ಅಂದಾಜಿಸಲಾಗಿದೆ.
ಮೂರು ಎಲಿಮೆಂಟ್ ಅಳವಡಿಕೆ ಯಶಸ್ವಿ (ETV Bharat) ಮೂರು ಎಲಿಮೆಂಟ್ ಇಳಿಸಿದ ನಂತರ 19ನೇ ಕ್ರಸ್ಟ್ ಗೇಟ್ ಮೂಲಕ ಹರಿಯುತ್ತಿದ್ದ ನೀರು ಬಂದ್ ಆಗಿದ್ದು, ಅದರ ಜೊತೆಗೆ ಇನ್ನಿತರ ಗೇಟ್ಗಳ ಮೂಲಕ ನದಿಗೆ ಹರಿಬಿಟ್ಟಿದ್ದ ನೀರನ್ನು ಕೂಡ ಬಂದ್ ಮಾಡಲಾಗಿದೆ. ಒಟ್ಟು ಐದು ಎಲಿಮೆಂಟ್ ಅಳವಡಿಸಿದಲ್ಲಿ 105 ಟಿಎಂಸಿ ನೀರು ಸಂಗ್ರಹವಾಗಲಿದ್ದು, ರೈತರಿಗೆ ಎರಡನೇ ಬೆಳೆಗೂ ನೀರು ಸಿಗಲಿದೆ. ಇಂದು ಮೂರು ಎಲಿಮೆಂಟ್ ಅಳವಡಿಸಿ ಉಳಿದ ಎರಡು ಎಲಿಮೆಂಟ್ಗಳನ್ನು ಸೋಮವಾರ ಅಳವಡಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ಕಿತ್ತುಹೋಗಿದ್ದ ಹಳೆ ಕ್ರಸ್ಟ್ ಗೇಟ್ ಪತ್ತೆ (ETV Bharat) ಕಿತ್ತುಹೋಗಿದ್ದ ಹಳೆ ಕ್ರಸ್ಟ್ ಗೇಟ್ ಪತ್ತೆ:ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ಗೆ ಮೂರು ಎಲಿಮೆಂಟ್ ಇಳಿಸಿದ ಬಳಿಕ ನದಿಗೆ ಹರಿಯುತ್ತಿದ್ದ ನೀರು ಬಹುತೇಕ ನಿಂತಿದ್ದು, ಕಳೆದ ವಾರ ನದಿಗೆ ಕಳಚಿಬಿದ್ದಿದ್ದ 19ನೇ ಕ್ರಷ್ಟ್ ಗೇಟ್ ನದಿಯಲ್ಲಿ ಬಿದ್ದಿರುವುದು ಕಾಣುತ್ತಿದೆ. ಕ್ರಸ್ಟ್ ಗೇಟ್ ಮುಂಭಾಗದಲ್ಲಿಯೇ ಅದು ಗೋಚರವಾಗಿದೆ.
''ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ ಗೇಟ್ ನಂಬರ್ 19 ಕ್ಕೆ ಬದಲಿಯಾಗಿ 5 ತಡೆ ಗೇಟುಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು, ಈ ಸವಾಲಿನ ಕಾರ್ಯಕ್ಕೆ ಸ್ಥಳದಲ್ಲೇ ಮೊಕ್ಕಾಂಹೂಡಿ ಸೂಕ್ತ ಮಾರ್ಗದರ್ಶನ ನೀಡಿದ ಡ್ಯಾಂ ಗೇಟ್ ನಿರ್ಮಾಣ ಹಾಗೂ ಸುರಕ್ಷತೆ ತಜ್ಞ ನಿವೃತ್ತ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರಿಗೆ ಹಾಗೂ ಈ ಕಾರ್ಯದಲ್ಲಿ ಅವಿರತ ಶ್ರಮಿಸಿದ ಎಲ್ಲಾ ಇಂಜಿನಿಯರರಿಗೆ, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ, ಕಾರ್ಮಿಕರಿಗೆ ನಾಡಿನ ರೈತರ ಪರವಾಗಿ ಮತ್ತು ವೈಯಕ್ತಿಕವಾಗಿ ಧನ್ಯವಾದಗಳು. ಭಾರೀ ಪ್ರಮಾಣದ ನೀರಿನ ಹೊರಹರಿವಿದ್ದರೂ ಗೇಟ್ ಅಳವಡಿಕೆಯಂತಹ ಕಷ್ಟಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಿ, ನಾಡಿನ ರೈತರನ್ನು ಆತಂಕದಿಂದ ಮುಕ್ತಗೊಳಿಸಿದ್ದೇವೆ. ತುಂಗಭದ್ರಾ ಜಲಾಶಯದ ನೀರನ್ನು ಆಧರಿಸಿ ಎರಡು ಬೆಳೆ ಬೆಳೆಯುವ ರೈತರು ಇನ್ನು ನಿಶ್ಚಿಂತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ನಾಡಿನ ಅನ್ನದಾತರು ಬಹುದೊಡ್ಡ ಸಂಕಷ್ಟದಿಂದ ಪಾರಾದದ್ದು ನನಗೆ ಖುಷಿ ನೀಡಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ: ಸಚಿವ ಶಿವರಾಜ ತಂಗಡಗಿ - Shivaraj Tangadagi