ತುಮಕೂರು:ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಸೇರಿದಂತೆ 32 ಪ್ರಕರಣದಲ್ಲಿ ಭಾಗಿಯಾಗಿದ್ದ ಖತರ್ನಾಕ್ ಖದೀಮನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜೇಶ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸುವ ವೇಳೆ ಸಾಹಸ ತೋರಿದ ಪೊಲೀಸ್ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯ ಸಾಹಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತೀಚೆಗೆ, ಕೊರಟಗೆರೆ ಟೌನ್ ಡಿಸಿಸಿ ಬ್ಯಾಂಕ್ ಹತ್ತಿರದ ಮನೆಯೊಂದರಲ್ಲಿ ಆರೋಪಿ ಮಂಜೇಶ್ ಕಳ್ಳತನ ಮಾಡಿದ್ದ. ಆರೋಪಿ ಪತ್ತೆಗೆ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿತ್ತು. ಜೊತೆಗೆ, ವಾಹನ ಸಂಚಾರದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಆರೋಪಿಯು ತುಮಕೂರು ನಗರದಲ್ಲಿ ಸಂಚರಿಸಿ, ನಂತರ ದಾಬಸ್‌ಪೇಟೆ, ನೆಲಮಂಗಲ ಮೂಲಕ ಬೆಂಗಳೂರು ತಲುಪಿರುವುದು ಗೊತ್ತಾಗಿತ್ತು.
ಕಳ್ಳನನ್ನು ಹಿಡಿದ ಕಾನ್ಸ್ಟೇಬಲ್:ಆಗಸ್ಟ್ 6ರಂದು ಆರೋಪಿ ಮಂಜೇಶ್ ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದರಿಂದ ಎಚ್ಚೆತ್ತ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯ ಆರೋಪಿಯನ್ನು ಬೈಕ್ ಸಮೇತ ಅಡ್ಡಗಟ್ಟಿದ್ದಾರೆ. ಆದರೆ, ಆರೋಪಿ ಮಂಜೇಶ್ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಿನಿಮೀಯ ರೀತಿಯಲ್ಲಿ ಆರೋಪಿಯ ಕಾಲನ್ನು ಬಿಗಿಯಾಗಿ ಹಿಡಿದುಕೊಂಡು, ಸುಮಾರು 20 ಮೀಟರ್ ದೂರ ಎಳೆದೊಯ್ದರೂ ಬಿಡದ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯ, ಆತನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲೇ ಇದ್ದ ಸದಾಶಿವನಗರ ಟ್ರಾಫಿಕ್ ಠಾಣಾ ಮಹಿಳಾ ಎಎಸ್‌ಐ ನಾಗಮ್ಮ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀಧರ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.