ಮಂಗಳೂರು:ಇತ್ತೀಚೆಗೆ ಗೂಗಲ್ ಟ್ರಾನ್ಸ್ಲೇಟರ್ನಲ್ಲಿ ತುಳು ಭಾಷೆಯನ್ನು ಸೇರ್ಪಡೆಗೊಳಿಸಿದ ನಂತರ ಇದೀಗ ತುಳು ಲಿಪಿ ಯೂನಿಕೋಡ್‌ನಲ್ಲಿ ಲಭ್ಯವಾಗುತ್ತಿದೆ. ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಡಿ ತುಳು ಭಾಷೆ ಸೇರುವ ಅವಕಾಶವನ್ನು ಸರಕಾರ ಕಲ್ಪಿಸದಿದ್ದರೂ ತುಳು ಲಿಪಿ ಈಗ 'ಯೂನಿಕೋಡ್'ಗೆ ಸೇರ್ಪಡೆಯಾಗಿದೆ.
ಯೂನಿಕೋಡ್ ಆವೃತ್ತಿ 16ರಲ್ಲಿ ತುಳು ಲಿಪಿ ಸೇರ್ಪಡೆಯಾಗಿದೆ. ಇದರಲ್ಲಿ ಒಟ್ಟು 80 ಅಕ್ಷರಗಳನ್ನು ಸೇರಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು ಲಿಪಿ ಲಭ್ಯವಾಗಿರುವ ಕಾರಣ ಮುಂದಿನ ದಿನಗಳಲ್ಲಿ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, Text ಟು ಸ್ಪೀಚ್, ಸ್ಪೀಚ್ ಟು Text ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇವೆಲ್ಲವನ್ನೂ ಮಾಡಲು ಸಾಧ್ಯವಾಗಲಿದೆ.
2017ರಲ್ಲಿ ಯೂನಿಕೋಡ್ ಅಗತ್ಯದ ಹಿನ್ನೆಲೆಯಲ್ಲಿ ತುಳು ಸಾಹಿತ್ಯ ಅಕಾಡೆಮಿಯು ತುಳು ಅಕ್ಷರಗಳನ್ನು ಅಂತಿಮಗೊಳಿಸಲು ಒಂದು ಸಮಿತಿ ರಚಿಸಿತ್ತು. ಮಾಹಿತಿ ತಂತ್ರಜ್ಞಾನ ತಜ್ಞರಾದ ಯು.ಬಿ.ಪವನಜ ತಾಂತ್ರಿಕ ಸಲಹೆ ನೀಡಿದ್ದರು. ಇದರಂತೆ ತುಳು ಅಕ್ಷರಗಳ ಪಟ್ಟಿ ಮಾಡಲಾಗಿತ್ತು. 80 ಪುಟಗಳ ಪಟ್ಟಿಯನ್ನು ಯುನಿಕೋಡ್‌ಗೆ ಕಳುಹಿಸಲಾಗಿತ್ತು. ಇದೇ ಸಂದರ್ಭ 'ತಿಗಳಾರಿ ಲಿಪಿ' ಎಂದು ಪ್ರತ್ಯೇಕ ಪ್ರಸ್ತಾವನೆ ಕೂಡ ಸಲ್ಲಿಸಲಾಗಿತ್ತು.
ಬಳಿಕ ಎರಡೂ ಕಡೆ ಹಲವು ಪತ್ರ ವ್ಯವಹಾರಗಳು ನಡೆದು ಅಂತಿಮವಾಗಿ 'ತುಳು-ತಿಗಳಾರಿ' ಹೆಸರಿನಲ್ಲಿ ಲಿಪಿಯನ್ನು ಯೂನಿಕೋಡ್‌ಗೆ ಸೇರಿಸಲಾಗಿದೆ. ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ ಅವರು 2001ರಲ್ಲಿ ಯೂನಿಕೋಡ್ ಕನ್ಸೋರ್ಶಿಯಂಗೆ ಹೋಗಿದ್ದಾಗ ಯೂನಿಕೋಡ್‌ನಲ್ಲಿ ಕನ್ನಡವನ್ನು ಸರಿಪಡಿಸಲು ಸಹಾಯ ಮಾಡಿದ್ದರು. ಆಗ ತುಳುವನ್ನು ಕೂಡ ಸೇರಿಸಬೇಕೆಂದು ಮನವಿ ಮಾಡಿದ್ದರು.
ಅದರಂತೆ, ತುಳುವಿಗೆ ಒಂದು ಜಾಗ ಕಾಯ್ದಿಟ್ಟಿದ್ದರು. ತುಳು ಯೂನಿಕೋಡ್ ಲಿಪಿ ಹೇಗಿರಬೇಕು ಎಂಬ ಕಡತ ಕಳುಹಿಸಿ ಎಂದು ಆಗ ಅವರು ಕೇಳಿಕೊಂಡಿದ್ದರು. ತುಳು ಅಕಾಡೆಮಿ ಕಳುಹಿಸಿದ ಅಕ್ಷರಗಳ ಪಟ್ಟಿಗೂ ಈಗ ತುಳು-ತಿಗಲಾರಿ ಹೆಸರಿನಲ್ಲಿ ಯುನಿಕೋಡ್‌ನವರು ಅಂತಿಮಗೊಳಿಸಿದ ಪಟ್ಟಿಗೂ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಆದರೆ ಬಹುತೇಕ ಅಕ್ಷರಗಳು ಬಂದಿವೆ.
ಈಡೇರಿದ ಬಹು ವರ್ಷಗಳ ಕನಸು:"ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಸಮಸ್ತ ತುಳುವರ ಬಹು ವರ್ಷದ ಕನಸು ಈಡೇರಿದೆ" ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.