ಕರ್ನಾಟಕ

karnataka

ETV Bharat / state

ಕಿತ್ತೂರು ಉತ್ಸವದಲ್ಲಿ ಕ್ರೀಡೆಗಳ ಕಲರವ: ಹಗ್ಗಜಗ್ಗಾಟ, ವಾಲಿಬಾಲ್​, ಕಬಡ್ಡಿಯಲ್ಲಿ ಗೆದ್ದು ಬೀಗಿದವರಾರು!

200ನೇ ಕಿತ್ತೂರು ಚೆನ್ನಮ್ಮನ ವಿಜಯೋತ್ಸವದ 2ನೇ ದಿನದಂದು ಸಾರ್ವಜನಿಕರಿಗಾಗಿ ಕ್ರೀಡಾಕೂಟ ನಡೆದಿದ್ದು, ಸಾವಿರಾರು ಮಂದಿ ಆಗಮಿಸಿ ಎಂಜಾಯ್​ ಮಾಡಿದ್ದಾರೆ.

ಹಗ್ಗಜಗ್ಗಾಟ, ವಾಲಿಬಾಲ್​, ಕಬಡ್ಡಿಯಲ್ಲಿ ಗೆದ್ದು ಬೀಗಿದವರಾರು!
ಹಗ್ಗಜಗ್ಗಾಟ, ವಾಲಿಬಾಲ್​, ಕಬಡ್ಡಿಯಲ್ಲಿ ಗೆದ್ದು ಬೀಗಿದವರಾರು! (ETV Bharat)

By ETV Bharat Karnataka Team

Published : 6 hours ago

ಬೆಳಗಾವಿ:ಕಿತ್ತೂರು ಚೆನ್ನಮ್ಮನ 200ನೇ ವಿಜಯೋತ್ಸವದ 2ನೇ ದಿನ ನಡೆದ ಕ್ರೀಡಾಕೂಟ ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಅದರಲ್ಲೂ ಹಗ್ಗಜಗ್ಗಾಟ ಕ್ರೀಡಾಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು.

ಕಿತ್ತೂರು ಉತ್ಸವ ಎಂದರೆ ಕೇವಲ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸಿಮೀತವಾಗಿಲ್ಲ. ಕ್ರೀಡಾಭಿಮಾನಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಿತ್ತೂರು ಪಟ್ಟಣದ ಕಲ್ಮಠದ ಶ್ರೀ ಗುರುಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಹಗ್ಗಜಗ್ಗಾಟ, ವಾಲಿಬಾಲ್​, ಕಬಡ್ಡಿ ಪಂದ್ಯಾವಳಿಗಳು ಜರುಗಿದವು.

ಕಿತ್ತೂರು ಉತ್ಸವದಲ್ಲಿ ಕ್ರೀಡೆಗಳ ಕಲರವ: ಹಗ್ಗಜಗ್ಗಾಟ, ವಾಲಿಬಾಲ್​, ಕಬಡ್ಡಿಯಲ್ಲಿ ಗೆದ್ದು ಬೀಗಿದವರಾರು! (ETV Bharat)

ವಾಲಿಬಾಲ್​ ಪಂದ್ಯದಲ್ಲಿ 44 ಪುರುಷ, 18 ಮಹಿಳಾ ತಂಡಗಳು ಭಾಗಿಯಾಗಿದ್ದರೆ, ಕಬಡ್ಡಿಯಲ್ಲಿ 33 ಪುರುಷರು, 16 ಮಹಿಳಾ ತಂಡಗಳು, ಹಗ್ಗ ಜಗ್ಗಾಟದಲ್ಲಿ 10 ಪುರುಷ, 14 ಮಹಿಳೆಯರ ತಂಡಗಳು ಸೆಣಸಾಟ ನಡೆಸಿದವು. ನಾಡಿನ ಮೂಲೆ, ಮೂಲೆಯಿಂದ ಆಗಮಿಸಿದ್ದ ಕ್ರೀಡಾಪಟುಗಳು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಿದರು. ಇನ್ನು ಸಾವಿರಾರು ಜನರು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.

ಹಗ್ಗಜಗ್ಗಾಟದ ಕಸರತ್ತು:ಇದೇ ಮೊದಲ ಬಾರಿ ಆಯೋಜಿಸಿದ್ದ ಹಗ್ಗಜಗ್ಗಾಟ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ತಂದು ಕೊಟ್ಟಿತು. ನಾರಿಯರು ಹಗ್ಗಜಗ್ಗಿ ತಮ್ಮ ಕಸರತ್ತು ಪ್ರದರ್ಶಿಸಿದರು. ಇನ್ನು ಯುವಕರು ಕೂಡ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. ಆಟಗಾರರಿಗೆ ನೆರೆದಿದ್ದ ಕ್ರೀಡಾಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಕೊನೆಯದಾಗಿ ಮಹಿಳೆಯರ ವಿಭಾಗದಲ್ಲಿ ಬೆಳಗಾವಿ ಕ್ರೀಡಾ ಇಲಾಖೆ ತಂಡವು, ಬ್ಯಾಡಗಿ ತಂಡದ ವಿರುದ್ಧ ಗೆಲುವು ಸಾಧಿಸಿದರೆ, ಪುರುಷರಲ್ಲಿ ಕಿತ್ತೂರು ತಾಲೂಕಿನ ಅವರಾದಿ ತಂಡವು, ಕಿಟದಾಳ ವಿರುದ್ಧ ಗೆದ್ದು ಬೀಗಿತು.

ಅದೇ ರೀತಿ ವಾಲಿಬಾಲ್​ ಪಂದ್ಯದ ಮಹಿಳೆಯರ ವಿಭಾಗದಲ್ಲಿ ಬೆಳಗಾವಿ ವಿರುದ್ಧ ಮಂಗಳೂರು ತಂಡವು ಗೆಲುವಿನ ಕೇಕೆ ಹಾಕಿತು. ಕಬಡ್ಡಿ ಮಹಿಳೆಯರ ವಿಭಾಗದಲ್ಲಿ ದೇಸೂರ ವಿರುದ್ಧ ಚಿಂಚಲಿ ತಂಡವು ಭರ್ಜರಿ ಗೆಲುವು ಕಂಡಿತು. ವಿಜೇತ ತಂಡಗಳಿಗೆ ಗಣ್ಯರು ಬಹುಮಾನ‌ ವಿತರಿಸಿದರು.

ಕ್ರೀಡಾ ಮತ್ತು ಯುವಜನಸೇವಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಈಟಿವಿ ಭಾರತ ಜೊತೆಗೆ ಮಾತನಾಡಿ, "ಇಂದು ವಾಲಿಬಾಲ್​, ಕಬಡ್ಡಿ, ಹಗ್ಗಜಗ್ಗಾಟ ನಡೆದಿವೆ. ನಾಳೆ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ವಿಶೇಷವಾಗಿ ಈ ಬಾರಿ ಆಯೋಜಿಸಿದ್ದ ಹಗ್ಗಜಗ್ಗಾಟದಲ್ಲಿ ಕ್ರೀಡಾಪಟುಗಳು ಆಸಕ್ತಿಯಿಂದ ಭಾಗವಹಿಸಿದ್ದರು. ಇದು ಪ್ರೇಕ್ಷಕರಿಗೆ ಕಸರತ್ತು ಮತ್ತು ಮನರಂಜನೆ ಎರಡೂ ನೀಡಿತು" ಎಂದು ಹೇಳಿದರು.

ಸೌಮ್ಯ ರಾಘವೇಂದ್ರ ಮಾತನಾಡಿ, "ಕಿತ್ತೂರಿನ ಬೆಳ್ಳಿಚುಕ್ಕಿ ತಂಡದಿಂದ ನಾವು ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡಿದ್ದೆವು. ಪ್ರತಿನಿತ್ಯ ನಾವು ಮನೆಗೆಲಸದಲ್ಲಿ ಬ್ಯೂಸಿಯಾಗಿರುತ್ತಿದ್ದೆವು. ಬಹಳ ದಿನಗಳ ಬಳಿಕ ಇಂಥ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇವೆ. ಸಖತ್ ಎಂಜಾಯ್ ಮಾಡಿದ್ದೇವೆ. ನಮ್ಮ‌ ಬಾಲ್ಯದ ದಿನಗಳು ನೆನಪಿಗೆ ಬಂದವು. ಒಳ್ಳೆಯ ಅನುಭವ ನಮಗೆ ಸಿಕ್ಕಿತು" ಎಂದು ಹರ್ಷ ವ್ಯಕ್ತಪಡಿಸಿದರು.

"ಸಾಮರ್ಥ್ಯ ಒರೆಗಚ್ಚಿ ಆಟ ಆಡಿದೆವು. ಜನರು ನಮಗೆ ಸಾಕಷ್ಟು ಪ್ರೋತ್ಸಾಹ ಮಾಡಿದರು. ಹಾಗಾಗಿ, ನಮಗೆ ಗೆಲುವು ಸಾಧ್ಯವಾಯಿತು. ಅದರಲ್ಲೂ ಅಮ್ಮಂದಿರ ವಿರುದ್ಧ ಆಡಿದ್ದು ಬಹಳ ಖುಷಿ ಆಯಿತು" ಎಂದು ಹಗ್ಗಜಗ್ಗಾಟ ವಿಜೇತ ತಂಡದ ಸಹನಾ ಅಭಿಪ್ರಾಯ ಪಟ್ಟರು.

ಇದನ್ನೂ ಓದಿ:ಕಿತ್ತೂರು ಉತ್ಸವ ಫಲಪುಷ್ಪ ಪ್ರದರ್ಶನ: ಮರಳಿನಲ್ಲಿ ರಾಣಿ ಚೆನ್ನಮ್ಮ, ಸಿರಿಧಾನ್ಯಗಳಲ್ಲಿ ಅರಳಿದ ಮಡಿವಾಳ ಅಜ್ಜ

ABOUT THE AUTHOR

...view details