ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ನೀಡುವ ಟಿ.ಎಸ್.ರಾಮಚಂದ್ರರಾವ್ (ಟಿಎಸ್‍ಆರ್) ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದೆ.
ಕೋವಿಡ್ ಸೇರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದ 2019 ರಿಂದ 2023ನೇ ಸಾಲಿನ ಒಟ್ಟು 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅಧ್ಯಕ್ಷತೆಯ ರಚಿತವಾದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ, ಶಾಂತಲಾ ಧರ್ಮರಾಜ್, ಎಂ.ಎಸ್.ಮಣಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅವರಿದ್ದರು. ಈ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅನುಮೋದಿಸಿ ಪ್ರಶಸ್ತಿ ಘೋಷಿಸಿದೆ.
ಟಿ.ಎಸ್. ರಾಮಚಂದ್ರರಾವ್ (ಟಿಎಸ್‍ಆರ್) ಪತ್ರಿಕೋದ್ಯಮ ಪ್ರಶಸ್ತಿ: ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸುವ ಪತ್ರಕರ್ತರೊಬ್ಬರಿಗೆ ಅವರ ನೆನಪಿನಲ್ಲಿ 1993 ರಿಂದ ಕರ್ನಾಟಕ ಸರ್ಕಾರ ಪ್ರತಿ ವರ್ಷ "ಟಿಎಸ್‍ಆರ್ ಪತ್ರಿಕೋದ್ಯಮ ಪ್ರಶಸ್ತಿ' ನೀಡುತ್ತದೆ. ಈ ಪ್ರಶಸ್ತಿ ಮೊತ್ತ 2 ಲಕ್ಷ ರೂಪಾಯಿಗಳು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.
2018 ರವರೆಗೆ 26 ಜನ ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ. ಶಿವಾಜಿ ಗಣೇಶನ್, ಪದ್ಮರಾಜ ದಂಡಾವತಿ, ಡಾ. ಆರ್. ಪೂರ್ಣಿಮಾ, ಕಾಟ್ಕರ್ ಸೇರಿ 5 ಜನ ಪತ್ರಕರ್ತರಿಗೆ ಟಿಎಸ್‍ಆರ್ ಪ್ರಶಸ್ತಿ ಹಾಗೂ ಹೊನ್ನಾಪುರ, ಪಾಲೆತ್ತಾಡಿ, ಕ್ರಾಂತಿ ಮಂಜುನಾಥ ಸೇರಿ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ ಘೋಷಿಸಲಾಗಿದೆ.
2019ನೇ ಸಾಲಿಗೆ ಶಿವಾಜಿ ಎಸ್ ಗಣೇಶನ್: 1978ರಿಂದ ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ವಿವಿಧ ಹುದ್ದೆಗಳಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ತುಮಕೂರು, ನವದೆಹಲಿ ಸೇರಿದಂತೆ ವಿವಿಧೆಡೆ ವರದಿಗಾರರಾಗಿ ಮಹತ್ವಪೂರ್ಣ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಅಂಕಣ ಬರಹ ಮುಂದುವರಿಸಿರುವ ಶಿವಾಜಿ ಗಣೇಶನ್ ಅವರು 2015ರಲ್ಲಿ ಸರ್ಕಾರ ನಿಯೋಜಿಸಿದ್ದ “ಕರ್ನಾಟಕದಲ್ಲಿ ಜೀತಪದ್ದತಿ ಪರಿಶೀಲನಾ ಸಮಿತಿ” ಅಧ್ಯಕ್ಷರಾಗಿ 2 ವರ್ಷಗಳ ಕಾಲ ಅಧ್ಯಯನ ಮಾಡಿ ನೀಡಿದ ವರದಿಯ ಕೆಲ ಶಿಫಾರಸುಗಳನ್ನು ಸರ್ಕಾರ ಜಾರಿಗೊಳಿಸಿದೆ. ಕರ್ನಾಟಕದಲ್ಲಿ ದಲಿತ ಚಳವಳಿಯ ಹೆಜ್ಜೆಗಳು, ದೇವೇಗೌಡರ ಪ್ರಧಾನಿಯ ದಿನಗಳು ಸೇರಿದಂತೆ ಅನೇಕ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.
2020ನೇ ಸಾಲಿಗೆ ಶ್ರೀಕಾಂತಾಚಾರ್ಯ.ಆರ್.ಮಣೂರ: 1973ರಿಂದ ಸಂಯುಕ್ತ ಕರ್ನಾಟಕದಲ್ಲಿ ಸೇವೆ ಆರಂಭಿಸಿದ ಇವರು ಇದೇ ಪತ್ರಿಕೆಯ ವಿವಿಧ ಹುದ್ದೆಗಳಲ್ಲಿ 44 ವರ್ಷಗಳ ಸೇವೆ ಸಲ್ಲಿಸಿ ಕಲಬುರಗಿ ಆವೃತ್ತಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ. ಕಲಬುರಗಿ-ವಿಜಯಪುರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕೃಷ್ಣೆ-ಭೀಮೆ ನದಿಗಳ ಯೋಜನೆಗಳು ಹಾಗೂ 371ಜೆ ಸೌಲಭ್ಯ ಕುರಿತು ಅಗ್ರ ಲೇಖನಗಳನ್ನು ಬರೆದಿದ್ದಾರೆ. ಹೈದರಾಬಾದ್ ಕರ್ನಾಟಕ ವಿಮೋಚನೆ ಕುರಿತು ಪುಸ್ತಿಕ, ಸಂವಿಧಾನ ತಿದ್ದುಪಡಿ 371(ಜೆ)ಕುರಿತು ಪುಸ್ತಕಗಳನ್ನು ರಚಿಸಿದ್ದಾರೆ.
2021ನೇ ಸಾಲಿಗೆ ಡಾ.ಆರ್.ಪೂರ್ಣಿಮಾ:1981ರಿಂದ ವೃತ್ತಿ ಆರಂಭಿಸಿದ ಅವರು ಪ್ರಜಾವಾಣಿ, ಉದಯವಾಣಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಇವರು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಯ ಸಂಪಾದಕ ಸ್ಥಾನದ ಜವಾಬ್ದಾರಿ ಹೊತ್ತ ಪ್ರಥಮ ಮಹಿಳೆ ಎಂಬ ಹಿರಿಮೆ ಇವರದ್ದು. ಹೆಸರಾಂತ ಪತ್ರಕರ್ತ ಕುಲದೀಪ್ ನಯ್ಯರ್ ಅವರ ಆತ್ಮಕಥೆ “ಒಂದು ಜೀವನ ಸಾಲದು” ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಡಿನ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
2022ನೇ ಸಾಲಿಗೆ ಡಾ.ಪದ್ಮರಾಜ ದಂಡಾವತಿ:ಮೂಲತಃ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದವರಾದ ಪದ್ಮರಾಜ ದಂಡಾವತಿ ಇವರು 1982ರಲ್ಲಿ ಪ್ರಜಾವಾಣಿಗೆ ಸೇರಿ 36 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ. ಕನ್ನಡ ಪತ್ರಿಕೋದ್ಯಮ 30 ವರ್ಷ ಎಂಬ ಪ್ರಬಂಧಕ್ಕೆ ಹಂಪಿಯ ಕನ್ನಡ ವಿವಿಯು ಡಿ.ಲಿಟ್ ಪದವಿ ನೀಡಿದೆ. ಪತ್ರಿಕಾ ಭಾಷೆ, ರಿಪೋರ್ಟಿಂಗ್, ಅವಲೋಕನ ಸೇರಿದಂತೆ ವಿವಿಧ ಕೃತಿಗಳು ಹೊರಬಂದಿವೆ. ಇವರ ಪ್ರಸಿದ್ಧ ಅಂಕಣ ನಾಲ್ಕನೇ ಆಯಾಮದ ಸಂಕಲನವು 6 ಸಂಪುಟಗಳಲ್ಲಿ ಪ್ರಕಟವಾಗಿದೆ. ಸೀತಾರಾಮಾಯಣ:ಸಚಿತ್ರ ಮರುಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.