ಕರ್ನಾಟಕ

karnataka

ETV Bharat / state

ಸಂಸತ್ತಿನಲ್ಲಿ ನೀರಾವರಿ ಯೋಜನೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ: ಬೊಮ್ಮಾಯಿ - MP Basavaraja Bommai - MP BASAVARAJA BOMMAI

ಸಂಸದ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದರು.

Resignation as MLA of Shiggaon Constituency
ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ (ETV Bharat)

By ETV Bharat Karnataka Team

Published : Jun 15, 2024, 3:56 PM IST

ಬೆಂಗಳೂರು: "ಸಂಸತ್ತಿನಲ್ಲಿ ಕರ್ನಾಟಕದ ನೀರಾವರಿ ಯೋಜನೆಗಳಾದ ಕೃಷ್ಣಾ, ಕಾವೇರಿ ಅಂತಾರಾಜ್ಯ ಜಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಸಂಸತ್ತಿನಲ್ಲಿ ಪ್ರಾಮಾಣಿಕವಾಗಿ ಕನ್ನಡಿಗರ ಪರವಾಗಿ ಧ್ವನಿ ಎತ್ತುವೆ" ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಮೇಲೆ ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. "ನಾನು ಸಂಸದನಾಗಿ ಆಯ್ಕೆಯಾಗಿ ದೆಹಲಿಗೆ ಹೋದರೂ, ಕರ್ನಾಟಕದ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ. ನಮ್ಮ ವರಿಷ್ಠರು ಅದೇ ಕಾರಣಕ್ಕೆ ಕೆಲವು ನಿರ್ಣಯ ತೆಗೆದುಕೊಂಡಿದ್ದಾರೆ" ಎಂದು ಹೇಳಿದರು.

"ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಪಡೆಯುವ ಬಗ್ಗೆ‌ ರಾಜ್ಯ ಸರ್ಕಾರ ನಿಯಮಾನುಸಾರ ಮನವಿ ಸಲ್ಲಿಸಬೇಕು. ಹಿಂದೆ ನಾವು ಎಐಬಿಪಿಯಲ್ಲಿ ಸುಮಾರು ಆರು ತಿಂಗಳು ದೆಹಲಿಯಲ್ಲಿ ನಮ್ಮ ಅಧಿಕಾರಿಗಳನ್ನು ಇಟ್ಟು ಸುಮಾರು 3,800 ಕೋಟಿ ರೂ. ತಂದಿದ್ದೆ. ಕೇಂದ್ರದ ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಮೀಸಲಿಟ್ಟಿರುವ 5,000 ಕೋಟಿ ರೂ. ತರಲು ರಾಜ್ಯದ ಸಚಿವರು ಹಾಗೂ ಕೇಂದ್ರ ಸರ್ಕಾರದ ಸಚಿವರ ಜೊತೆ ಮಾತನಾಡಿ ಹಣ ತರಲು ಪ್ರಯತ್ನಿಸುತ್ತೇನೆ" ಎಂದರು.

"ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ನಾವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆವು. ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿಲ್ಲ. ಆದರೆ, ನಮ್ಮ ಒತ್ತಾಸೆಯ ಕಾರಣಕ್ಕೆ ಈ ಯೋಜನೆಗೆ ವಿಶೇಷವಾಗಿ 5,000 ಕೋಟಿ ರೂ. ನೀಡುವ ಭರವಸೆ ನೀಡಿದ್ದರು" ಎಂದು ತಿಳಿಸಿದರು.

ಶಿಗ್ಗಾವಿ ಕ್ಷೇತ್ರದ ಜನತೆಗೆ ಕೃತಜ್ಞತೆ:"ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಆಯ್ಕೆಯಾದ ಹಿನ್ನೆಲೆ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಶಿಗ್ಗಾಂವಿ ಕ್ಷೇತ್ರದ ಜನತೆಗೆ ಕೃತಜ್ಞತೆ ಹೇಳುತ್ತೇನೆ. ನಿರಂತರವಾಗಿ 4 ಬಾರಿ ಆಯ್ಕೆ ಮಾಡಿ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ" ಎಂದು ಹೇಳಿದರು.

"ಶಿಗ್ಗಾಂವಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇನ್ನಷ್ಟು ಅಭಿವೃದ್ಧಿಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಸಿಎಂ ಬೆಂಗಳೂರಿಗೆ ಬಂದ ತಕ್ಷಣ ಅವರ ಬಳಿ ಚರ್ಚಿಸಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಚರ್ಚಿಸುತ್ತೇನೆ‌. ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವಿ ಬರುವುದರಿಂದ ಅದರ ಅಭಿವೃದ್ಧಿಗೆ ನನ್ನ ಶ್ರಮ ಮುಂದುವರೆಯಲಿದೆ" ಎಂದರು.

ಇದಕ್ಕೂ ಮುನ್ನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಜರಿದ್ದರು.

ಇದನ್ನೂ ಓದಿ:ಲೋಕ ಸಮರ ಗೆದ್ದು ರಾಷ್ಟ್ರ ರಾಜಕಾರಣಕ್ಕೆ ಸಜ್ಜಾದ ರಾಜ್ಯ ನಾಯಕರು: ಈ 4 ಕ್ಷೇತ್ರಗಳಿಗೆ ನಡೆಯಬೇಕಿದೆ ಉಪ ಚುನಾವಣೆ - By Election In Karnataka

ABOUT THE AUTHOR

...view details