ಬೆಂಗಳೂರು: ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಮೆಜೆಸ್ಟಿಕ್‌ನಲ್ಲಿ ರಂಗೋಲಿ ಕಲೆಯ ಮೂಲಕ ಮರೆಯಲಾಗದ ರತ್ನ, ಉದ್ಯಮಿ ದಿವಂಗತ ರತನ್ ಟಾಟಾ ಅವರಿಗೆ ವಿಶೇಷವಾಗಿ ನಮನ ಸಲ್ಲಿಸಲಾಗಿದೆ.
8X8 ಅಡಿಯ ಬೃಹತ್ ರಂಗೋಲಿಯನ್ನು ಮೆಟ್ರೋ ನಿಲ್ದಾಣದಲ್ಲಿ ಚಿತ್ರಿಸಲಾಗಿದೆ. ಕಲಾವಿದ ಅಕ್ಷಯ್ ಜಾಲಿಹಾಳ್ ಈ ರಂಗೋಲಿಯ ರುವಾರಿ. ನಿನ್ನೆ ರಾತ್ರಿ 9 ಗಂಟೆಯಿಂದ ಇಂದು ಬೆಳಗ್ಗೆ 7 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ಟಾಟಾರನ್ನು ಬಿಂಬಿಸುವ ವಿಶೇಷ ರಂಗೋಲಿ ಬಿಡಿಸಿದ್ದಾರೆ. ಈ ಪ್ರದರ್ಶನ ಸುಮಾರು 1 ತಿಂಗಳವರೆಗೆ ಇರಲಿದೆ.
ದಿವಂಗತ ರತನ್ ಟಾಟಾರಿಗೆ ರಂಗೋಲಿಯ ಮೂಲಕ ಗೌರವ ನಮನ (ETV Bharat) ಈ ಕುರಿತು ಅಕ್ಷಯ್ ಜಾಲಿಹಾಳ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, "ದಿವಂಗತ ರತನ್ ಟಾಟಾ ತಮ್ಮ ಜೀವಮಾನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಗಂಧದ ಮರದ ರೀತಿಯಲ್ಲಿಯೇ ಎಲ್ಲೆಡೆ ಸುಗಂಧ ಪಸರಿಸಿದ್ದಾರೆ. ಸಮಾಜ, ದೇಶಕ್ಕೆ ಪ್ರೇರಣಾಶಕ್ತಿಯಾಗಿದ್ದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಂಗೋಲಿ ಬಿಡಿಸಿದ್ದೇನೆ. ನನ್ನ ತಂದೆ ರವೀಂದ್ರ ಜಾಲಿಹಾಳ್ ಅವರ ಸಹಕಾರ ಈ ರಂಗೋಲಿ ಬಿಡಿಸಿರುವುದರಲ್ಲಿ ಸಾಕಷ್ಟಿದೆ. ನಮ್ಮ ಮೆಟ್ರೋ ಅಧಿಕಾರಿಗಳ ಒತ್ತಾಸೆ ಹಾಗೂ ಸಹಕಾರವೂ ಇದೆ" ಎಂದರು.
"ಅಂತಾರಾಷ್ಟ್ರೀಯ ರಂಗೋಲಿ ದಿನಾಚರಣೆ ಘೋಷಣೆಯಾಗಬೇಕು. ಶಾಲಾ, ಕಾಲೇಜುಗಳಲ್ಲಿ ಮುಖ್ಯವಾಗಿ ಕಲಾ ಕಾಲೇಜುಗಳಲ್ಲಿ ರಂಗೋಲಿ ವಿಭಾಗ ತೆರೆಯಬೇಕು. ಈ ಕಲಾ ಪ್ರಕಾರಕ್ಕೂ ಗೌರವ ಮತ್ತು ಸ್ಥಾನಮಾನ ದೊರೆಯಬೇಕು. ಸರ್ಕಾರ ರಂಗೋಲಿ ಕಲಾವಿದರಿಗೆ ಸಹಕಾರ, ಅನುದಾನ ಕೊಡಬೇಕು" ಎಂದು ಅಕ್ಷಯ್ ಇದೇ ವೇಳೆ ಒತ್ತಾಯಿಸಿದರು.
ಇದನ್ನೂ ಓದಿ:ಕರ್ನಾಟಕ ಹೂಡಿಕೆಗೆ ಪ್ರಮುಖ ತಾಣ ಎಂದಿದ್ದರು ರತನ್ ಟಾಟಾ; ರಾಜ್ಯಕ್ಕೆ ಟಾಟಾ ಕೊಡುಗೆಗಳು ಹಲವು