ಬೆಂಗಳೂರು: ಮಾಧ್ಯಮ ಲೋಕದ ಭೀಷ್ಮ, ರಾಮೋಜಿ ಗ್ರೂಪ್ ಮುಖ್ಯಸ್ಥ ದಿ.ರಾಮೋಜಿ ರಾವ್ ಅವರಿಗೆ ಈಟಿವಿ ಭಾರತದ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳ ವರದಿಗಾರರು ಇಂದು ಶ್ರದ್ಧಾಂಜಲಿ ಸಲ್ಲಿಸಿದರು.
ಬೆಂಗಳೂರಿನ ಮಾಧವನಗರದಲ್ಲಿರುವ ಈಟಿವಿ ಭಾರತ ಕಚೇರಿಯಲ್ಲಿ ನುಡಿ ನಮನ ಕಾರ್ಯಕ್ರಮದಲ್ಲಿ ಬೆಂಗಳೂರು ಬ್ಯೂರೋ ಮುಖ್ಯಸ್ಥ ಸೋಮಶೇಖರ್ ಕವಚೂರು ಸೇರಿದಂತೆ ಈಟಿವಿ ಭಾರತದ ಬೆಂಗಳೂರು ವರದಿಗಾರರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಹಾಗೂ ಆನೇಕಲ್ನ ವರದಿಗಾರರು, ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನದ ಮೂಲಕ ಅಶ್ರುತರ್ಪಣ ಸಲ್ಲಿಸಿದರು. ಬಳಿಕ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಯಿತು. ರಾಮೋಜಿ ರಾವ್ ಅವರು ಬೆಳೆದು ಬಂದ ದಾರಿ ಹಾಗೂ ಅವರು ನೀಡಿರುವ ಸಂದೇಶದ ಕಿರುಚಿತ್ರ ಪ್ರದರ್ಶಿಸಲಾಯಿತು. ಈ ವೇಳೆ ಬ್ಯೂರೊ ಮುಖ್ಯಸ್ಥ ಸೋಮಶೇಖರ್ ಕವಚೂರು, ರಾಮೋಜಿ ರಾವ್ ಸಿಬ್ಬಂದಿಗೆ ಬರೆದಿದ್ದ ಬದ್ಧತೆಯ ವಿಲ್ ಪತ್ರ ಓದಿದರು.
"ಆಂಧ್ರಪ್ರದೇಶದ ಒಂದು ಸಣ್ಣ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಅವರ ಸಾಧನೆ ಅಸಾಮಾನ್ಯವಾದದ್ದು. ಕಷ್ಟಪಟ್ಟು ಬೆಳೆದ ಅವರು ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿದರು. ಶಿಸ್ತಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ತಮ್ಮದೇ ಆದ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರು. ಯಾವುದೇ ಕೆಲಸವನ್ನಾಗಲೀ ವ್ಯವಸ್ಥಿತವಾಗಿ ಮಾಡುತ್ತಿದ್ದರು. ಅವರ ನಡೆ, ನುಡಿ, ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿ. ದೇಶಾದ್ಯಂತ ತಮ್ಮ ಮಾಧ್ಯಮವನ್ನು ವಿಸ್ತರಿಸಿ ಸೈ ಎನಿಸಿಕೊಂಡ ರಾಮೋಜಿ ರಾವ್ ಅವರ ಜೀವನದ ಕಥೆಯನ್ನು ಸಿನಿಮಾ ಮೂಲಕ ಹೊರಬಂದರೆ ಮುಂದಿನ ಪೀಳಿಗೆಗೂ ರಾವ್ ಅವರ ಜೀವನ ಸಾಧನೆ ಪ್ರೇರಣೆಯಾಗಲಿದೆ" ಎಂದು ಸೋಮಶೇಖರ್ ಕವಚೂರು ಬಣ್ಣಿಸಿದರು.
ಈಟಿವಿ ಭಾರತ ಬೆಂಗಳೂರಿನ ಹಿರಿಯ ವರದಿಗಾರರಾದ ಮುನೇಗೌಡ, ವೆಂಕಟ್ ಪೊಳಲಿ, ಪ್ರಶಾಂತ್ ಕುಮಾರ್, ರವಿಕುಮಾರ್, ರಫೀಕ್, ಕಂಟೆಂಟ್ ಎಡಿಟರ್‌ಗಳಾದ ಸತೀಶ್, ಸೀಮಾ, ಮೈಸೂರು ಜಿಲ್ಲೆಯ ಹಿರಿಯ ವರದಿಗಾರರಾದ ಮಹೇಶ್, ಶಿವಮೊಗ್ಗ ಜಿಲ್ಲೆಯ ಕಿರಣ್ ಕುಮಾರ್, ಚಾಮರಾಜನಗರ ಜಿಲ್ಲೆಯ ಸುರೇಂದ್ರ, ಮಂಡ್ಯ ಜಿಲ್ಲೆಯ ಮಧು, ದೇವನಹಳ್ಳಿಯ ಗುರುಪ್ರಸಾದ್, ಆನೇಕಲ್ ವರದಿಗಾರ ಮುನಿರಾಜು ಸೇರಿದಂತೆ ಇತರ ಹಿರಿಯ ಪತ್ರಕರ್ತರು ರಾಮೋಜಿ ರಾವ್ ಸಾಧನೆಯನ್ನು ಸ್ಮರಿಸಿದರು.
ಉತ್ತರ ಕರ್ನಾಟಕ ವರದಿಗಾರರಿಂದ ನುಡಿ ನಮನ:ರಾಮೋಜಿ ರಾವ್ ಅವರಿಗೆ ಉತ್ತರ ಕರ್ನಾಟಕ ಈಟಿವಿ ಭಾರತ ವರದಿಗಾರರು ಮತ್ತು ಮಾರ್ಗದರ್ಶಿ ಚಿಟ್ಸ್ ಫಂಡ್ ಕೇಂದ್ರದ ವ್ಯವಸ್ಥಾಪಕರು ಶ್ರದ್ಧಾಂಜಲಿ ಸಲ್ಲಿಸಿದರು.