ಹಾವೇರಿ : ಜಿಲ್ಲಾ ಪಂಚಾಯತ್ ಆವರಣದಲ್ಲಿ ಇದೀಗ ವಿನೂತನ ಕೆಫೆಯೊಂದು ನಿರ್ಮಾಣಗೊಳ್ಳುತ್ತಿದೆ. ಅಕ್ಕ ಕೆಫೆ ಹೆಸರಿನ ಈ ಕ್ಯಾಂಟೀನ್ ವಿಶೇಷತೆ ಎಂದರೆ ಈ ಕೆಫೆ ನಿರ್ವಹಣೆ ಮಾಡುವವರು ಲಿಂಗತ್ವ ಅಲ್ಪಸಂಖ್ಯಾತರು.
ಈ ಅಕ್ಕ ಕೆಫೆಯಲ್ಲಿ ಅಡುಗೆ ಮಾಡುವುದು, ಪೂರೈಕೆ ಮಾಡುವುದು, ಹಣದ ಕೌಂಟರ್ ನಿರ್ವಹಣೆ ಮಾಡುವವರೆಲ್ಲ ಲಿಂಗತ್ವ ಅಲ್ಪಸಂಖ್ಯಾತರು. ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಹಿಳಾ ಸಬಲೀಕರಣಕ್ಕಾಗಿ ಸುಮಾರು 50 ಅಕ್ಕ ಕೆಫೆ ನಿರ್ಮಿಸುತ್ತಿದೆ. ಬೆಂಗಳೂರಲ್ಲಿ ಈಗಾಗಲೇ ಅಕ್ಕ ಕೆಫೆ ಕಾರ್ಯಾರಂಭ ಮಾಡಿದ್ದು, ಅದರ ನಿರ್ವಹಣೆಯನ್ನ ಮಹಿಳೆಯರೇ ಮಾಡುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ್ ಅವರು ಮಾತನಾಡಿ, 'ರಾಜ್ಯದ ವಿವಿಧೆಡೆಯಲ್ಲಿ ನಿರ್ಮಾಣವಾಗಿರುವ ಅಕ್ಕ ಕೆಫೆಗಳನ್ನ ಸಹ ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ. ಆದರೆ, ಹಾವೇರಿಯಲ್ಲಿ ಅದು ಜಿಲ್ಲಾಡಳಿತದ ಸಂಕೀರ್ಣದ ಪಕ್ಕದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿಗೆ ಹೊಂದಿಕೊಂಡಂತೆ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆ ಮಾತ್ರ ಲಿಂಗತ್ವ ಅಲ್ಪಸಂಖ್ಯಾತರು ನಿರ್ವಹಣೆ ಮಾಡಲಿದ್ದಾರೆ. ಇದಕ್ಕೆ ಇಲ್ಲಿಯ ಲಿಂಗತ್ವ ಅಲ್ಪಸಂಖ್ಯಾತರ ಉತ್ಸಾಹ ಮತ್ತು ಸರ್ಕಾರದ ಸಹಕಾರ ಕಾರಣ' ಎಂದಿದ್ದಾರೆ.
15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕ ಕೆಫೆ ನಿರ್ಮಾಣ : ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ಕ ಕೆಫೆ ನಿರ್ಮಾಣ ಮಾಡುತ್ತಿರುವ ವಿಷಯ ತಿಳಿದ ಲಿಂಗತ್ವ ಅಲ್ಪಸಂಖ್ಯಾತರು, ಹಾವೇರಿಯಲ್ಲಿ ನಾವೇ ಅಕ್ಕ ಕೆಫೆ ನಿರ್ವಹಣೆ ಮಾಡುತ್ತೇವೆ ಎಂಬ ಉತ್ಸುಕತೆ ತೋರಿದರು. ಅದನ್ನ ನಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅದರಂತೆ ಸರ್ಕಾರ ಸಹ ಇದಕ್ಕೆ ಒಪ್ಪಿಗೆ ನೀಡಿದ್ದು, ಇದೀಗ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕ ಕೆಫೆ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಮಾದರಿ ಕೆಫೆಯಂತೆ ಅಕ್ಕ ಕೆಫೆಗಳು ನಿರ್ಮಾಣಗೊಳ್ಳುತ್ತಿವೆ. ಈಗಾಗಲೇ ಬೆಂಗಳೂರಲ್ಲಿ ಎರಡು ಅಕ್ಕ ಕೆಫೆಗಳು ಮಹಿಳೆಯರ ಒಕ್ಕೂಟದಿಂದ ಕಾರ್ಯನಿರ್ವಹಿಸುತ್ತಿವೆ. ಅಕ್ಕ ಕೆಫೆಯಲ್ಲಿ ಸ್ಥಳೀಯ ಪ್ರಸಿದ್ಧ ಆಹಾರಗಳನ್ನ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡಲಿದ್ದಾರೆ: ಹಾವೇರಿಯಲ್ಲಿ ಎರಡು ಅಕ್ಕ ಕೆಫೆಗೆ ಅರ್ಜಿ ಸಲ್ಲಿಸಲಾಗಿತ್ತು. ಅದರಲ್ಲಿ ಒಂದು ಜಿಲ್ಲಾ ಪಂಚಾಯತ್ ಕಚೇರಿಗೆ ಹೊಂದಿಕೊಂಡಂತೆ ಇನ್ನೊಂದು ರಾಣೆಬೆನ್ನೂರು ತಾಲೂಕಿನ ಕೊಡಿಯಾಲದಲ್ಲಿ ನಿರ್ಮಾಣವಾಗುತ್ತಿದೆ. ಹಾವೇರಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆ ಸಂಪೂರ್ಣ ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡಲಿದ್ದಾರೆ. ಜೊತೆಗೆ ಕೆಫೆಗೆ ಹೊಂದಿಕೊಂಡಂತೆ ಕೆಎಂಎಫ್ ಮಿಲ್ಕ್ ಪಾರ್ಲರ್ ಸ್ಥಾಪಿಸಲಾಗುತ್ತಿದ್ದು, ಅದನ್ನು ಸಹ ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.