ಕರ್ನಾಟಕ

karnataka

ETV Bharat / state

ಆಟವಾಡುವಾಗ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿದ ಅಣ್ಣ - ತಂಗಿ: ಶೋಧ

ಅಣ್ಣ- ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.

BROTHER SISTER DROWNED
ಶೋಧ ನಡೆಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ (ETV Bharat)

By ETV Bharat Karnataka Team

Published : 4 hours ago

Updated : 2 hours ago

ಬೆಂಗಳೂರು: ಆಟವಾಡುವಾಗ ಅಣ್ಣ- ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹರ್ಷ ಲೇಔಟ್‌ನ ಶ್ರೀನಿವಾಸ್ (13) ಮತ್ತು ಮಹಾಲಕ್ಷ್ಮೀ(11) ಕೆರೆಗೆ ಬಿದ್ದಿರುವ ಅಣ್ಣ-ತಂಗಿ. ಸೋಮವಾರ ಸಂಜೆ ಸುಮಾರು 5.30ಕ್ಕೆ ಕೆಂಗೇರಿ ಬಸ್‌ ನಿಲ್ದಾಣದ ಎದುರಿನ ಕೆರೆಯಲ್ಲಿ ಈ ಘಟನೆ ನಡೆದಿದೆ. ಜಯಮ್ಮ ಎಂಬುವವರ ಮಕ್ಕಳಾದ ಶ್ರೀನಿವಾಸ್ ಮತ್ತು ಮಹಾಲಕ್ಷ್ಮೀ ಕೆರೆಯ ವಾಕಿಂಗ್‌ ಪಾತ್‌ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಿಂದಿಗೆಯೊಂದು ಕೆರೆಗೆ ಉರುಳಿದ ಪರಿಣಾಮ ಮಹಾಲಕ್ಷ್ಮೀ ಬಿಂದಿಗೆ ಎತ್ತಿಕೊಳ್ಳಲು ಕೆರೆಗೆ ಇಳಿದಿದ್ದಾಳೆ. ಈ ವೇಳೆ ಆಕೆ ನೀರಿನಲ್ಲಿ ಮುಳಗಿದ್ದಾಳೆ. ತಂಗಿ ನೀರಿನಲ್ಲಿ ಮುಳುಗುವುದನ್ನು ನೋಡಿದ ಅಣ್ಣ ಸಹ ತಂಗಿಯನ್ನು ಮೇಲಕ್ಕೆ ಎಳೆಯಲು ಕೆರೆಗೆ ಇಳಿದಿದ್ದಾನೆ. ಈ ವೇಳೆ ಆತನೂ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರು ಮಕ್ಕಳಿಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಮಕ್ಕಳು ಪತ್ತೆಯಾಗಿಲ್ಲ. ನಗರದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಹಾಗೂ ಕತ್ತಲೆ ಆವರಿಸಿದ್ದರಿಂದ ತಡರಾತ್ರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಿಗ್ಗೆಯಿಂದಲೇ ಪುನಃ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.

ಈ ಸಂಬಂಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಮದ್ದೂರಮ್ಮನ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

Last Updated : 2 hours ago

ABOUT THE AUTHOR

...view details