ಬೆಂಗಳೂರು:ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ರಶೀದಿ ಬರೆದು ಕೊಡುವ ವ್ಯವಸ್ಥೆಗೆ ಪೊಲೀಸ್ ಇಲಾಖೆ ಗುಡ್ ಬೈ ಹೇಳಿದೆ. ಇ-ಚಲನ್ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಿದ್ದು, ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನ ಸಂಪೂರ್ಣವಾಗಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾದಂತಾಗಿದೆ.
ಏನಿದು ಇ ಚಲನ್ ವ್ಯವಸ್ಥೆ?:ಇ-ಚಲನ್ ಎಂಬುದು ಸಂಚಾರಿ ನಿಯಮಗಳ ಉಲ್ಲಂಘನೆ ಹಾಗೂ ದಂಡದ ವಿವರಗಳನ್ನೊಳಗೊಂಡ ಡಿಜಿಟಲ್ ದಾಖಲೆಯಾಗಿದ್ದು, ಇದನ್ನು ಪಡೆಯಲು ಸಂಚಾರಿ ಪೊಲೀಸ್ ಸಿಬ್ಬಂದಿ ನಿರ್ದಿಷ್ಟವಾದ ಸ್ವೈಪಿಂಗ್ ಸಾಧನ ಹೊಂದಿರಲಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್ ಮೂಲಕ ಚಲನ್ ಪಡೆದಾಗ ಪೊಲೀಸ್ ಇಲಾಖೆಯ ಸರ್ವರ್ನಲ್ಲಿಯೂ ಸಹ ಇದು ದಾಖಲಿಸಲ್ಪಡುತ್ತದೆ. ಇದರಿಂದಾಗಿ ಲಂಚ ಪಡೆದು ರಶೀದಿ ಕ್ಯಾನ್ಸಲ್ ಮಾಡಲು (ಹರಿದು ಹಾಕಲು) ಸಾಧ್ಯವಾಗುವುದಿಲ್ಲ. ಸಂಚಾರ ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವ ಹಾಗೂ ಪಾರದರ್ಶಕತೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಇದು ಕಾಗದ ರಹಿತ ಹಾಗೂ ಕೆಲಸವನ್ನ ತಗ್ಗಿಸಲಿದೆ.
ಸದ್ಯ ಈ ವ್ಯವಸ್ಥೆಗಾಗಿ ಎಸ್‌ಬಿಐ ಬ್ಯಾಂಕ್ನೊಂದಿಗೆ ರಾಜ್ಯ ಪೊಲೀಸ್ ಇಲಾಖೆಯು ಒಪ್ಪಂದ ಮಾಡಿಕೊಂಡಿದ್ದು, ವಾಹನ ಸವಾರರು ಪಾವತಿಸುವ ಹಣ ನೇರವಾಗಿ ಇಲಾಖೆಯ ಅಧಿಕೃತ ಖಾತೆಗೆ ಜಮೆಯಾಗಲಿದೆ. ಈ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ 722 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು ಮತ್ತು 64 ಸಂಚಾರ ಠಾಣೆಗಳ ಪೊಲೀಸ್ ಸಿಬ್ಬಂದಿಗೆ 1,766 ಇ-ಚಲನ್ ಯಂತ್ರಗಳನ್ನು ನೀಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು ಯುಪಿಐ, ಡೆಬಿಟ್ ಕಾರ್ಡ್ ಮತ್ತು ನಗದು ಪಾವತಿ ಸೇರಿದಂತೆ ವಿವಿಧ ವಿಧಾನಗಳ ಮೂಲಕ ದಂಡ ಪಾವತಿಸಬಹುದು.