ರಾಮನಗರ: ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಜಿಲ್ಲೆಯ ಗಡಿಭಾಗದಲ್ಲಿರುವ ಕನಕಪುರ ತಾಲೂಕಿನ ಸಂಗಮದಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯಿಂದ ಪಕ್ಕದ ರಾಜ್ಯ ತಮಿಳುನಾಡಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ.
ಕೆಆರ್ಎಸ್ ಮತ್ತು ಕಬಿನಿ ಜಲಾಶಯದಿಂದ ಸತತ ಒಂದು ವಾರಗಳಿಂದಲೂ ನಿರಂತರವಾಗಿ ಅಪಾರ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಸಂಗಮ ಸ್ಥಳ ಮೇಕೆದಾಟು ಬಳಿ ನದಿ ಭೋರ್ಗರೆದು ಹರಿಯುತ್ತಿದೆ.
ಅಪಾಯದ ಮಟ್ಟ ಮೀರಿ ನದಿಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಮುಳುಗಡೆ ಭೀತಿ ಇರುವ ಗ್ರಾಮಗಳ ಮೇಲೆ ನಿಗಾ ಇರಿಸಲಾಗಿದೆ. ಸದ್ಯಕ್ಕೆ ಕನಕಪುರ ತಾಲೂಕಿನಲ್ಲಿ ನೆರೆ ಭೀತಿ ಎದುರಾಗಿಲ್ಲ. 2 ಲಕ್ಷ ಕ್ಯೂಸೆಕ್ಗೂ ಹೆಚ್ಚು ನೀರು ನದಿಗೆ ಬಂದರೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ.