ಮಂಡ್ಯ:ಕಾವೇರಿ ನದಿಯಲ್ಲಿ ಈಜಲು ಹೋದ ತಂದೆ-ಮಗ ಸೇರಿ ನಾಲ್ವರು ನೀರು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಮುತ್ತತ್ತಿಯಲ್ಲಿ ನಡೆದಿದೆ. ಮೈಸೂರಿನ ಕನಕಗಿರಿ ಮೂಲದ ನಾಗೇಶ್ (40), ಭರತ್ (17), ಗುರುಕುಮಾರ್ (32) ಹಾಗೂ ಮಹದೇವ್ (16) ನೀರುಪಾಲಾದ ದುರ್ದೈವಿಗಳು.
ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂಡಿ ಮುತ್ತತ್ತಿ ಮುತ್ತುರಾಯನ ವಿಶೇಷ ಪೂಜೆಗೆ ತೆರಳಿದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮೈಸೂರಿನಿಂದ ಧಾರ್ಮಿಕ ಕಾರ್ಯ ನಿಮಿತ್ತ 40 ರಿಂದ 50 ಮಂದಿ ಬಸ್ನಲ್ಲಿ ಮುತ್ತತ್ತಿಗೆ ತೆರಳಿದ್ದರು. ಈ ವೇಳೆ, ನಾಲ್ವರು ಕಾವೇರಿ ನದಿಯಲ್ಲಿ ಈಜಲು ನೀರಿಗೆ ಇಳಿದಿದ್ದರು. ನೀರಿನ ಸೆಳೆತಕ್ಕೆ ಒಬ್ಬ ಸಿಲುಕಿದ್ದು ಈತನ ರಕ್ಷಣೆಗೆ ಮುಂದಾದಾಗ ನಾಲ್ವರು ಸಹ ನೀರು ಪಾಲಾಗಿದ್ದಾರೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಕ್ಕೆ ಶೋಧ ನಡೆದಿದೆ. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಈಜಲು ಹೋದ ಮೂವರು ಯುವಕರು ನೀರು ಪಾಲು, ಯಾದಗಿರಿಯಲ್ಲೂ ಒಬ್ಬ ಸಾವು - Youths Drown
ಮತ್ತೊಂದೆಡೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದ ಕಪಿಲಾ ನದಿಯ ಸೇತುವೆಯಲ್ಲಿ ಈಜಲು ಹೋದ ಮೂವರು ಯುವಕರು ಹಾಗೂ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ವ್ಯಾಪ್ತಿಯ ಅರಿಕೇರಾ ಬಿ. ಗ್ರಾಮದಲ್ಲಿ ಒಬ್ಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೂಡ ಇಂದೇ ನಡೆದಿದೆ.
ಕಪಿಲಾ ನದಿಯ ಸೇತುವೆಯಲ್ಲಿ ಬಿಹಾರ ಮೂಲದ ಮಿಲನ್(22), ಮೋಹನ್ (25), ತರುಣ್ (19) ಎಂಬುವರು ಮೃತಪಟ್ಟರೆ, ಅರಿಕೇರಾ ಬಿ. ಗ್ರಾಮದ ಬಸವಲಿಂಗಪ್ಪ (18) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಸವಲಿಂಗಪ್ಪನ ಮೃತ ದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಮಂಗಳವಾರ ಹೋಳಿ ಹಬ್ಬದ ನಿಮಿತ್ತ ಬಣ್ಣದಾಟವಾಡಿ ನಂತರ ಕೆರೆಯಲ್ಲಿ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ. ಬೆಳಗ್ಗೆ ಸ್ನೇಹಿತರ ಜೊತೆ ಬಣ್ಣದೋಕುಳಿ ಆಡಿ ನಂತರ ತಮ್ಮನ ಜೊತೆ ಕೆರೆಗೆ ಈಜಲು ತೆರಳಿದ್ದ. ಈ ವೇಳೆ, ಈಜು ಬರದೇ ನೀರಲ್ಲಿ ಮೃತಪಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು ಕಪಿಲಾ ನದಿ ಸೇತುವೆಯಲ್ಲಿ ಮುಳುಗಿದ ಮೂವರಲ್ಲಿ ಮಿಲನ್ ಎಂಬಾತನ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದ ಇಬ್ಬರು ಯುವಕರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೃತರು ಗುತ್ತಿಗೆ ಆಧಾರದ ಮೇಲೆ ಇಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈಜಲು ಹೋದ ಮೂವರು ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಇವರನ್ನು ಗಮನಿಸಿದ ಸ್ಥಳೀಯರು ನಂಜನಗೂಡು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಪಿಲಾ ನದಿಯಲ್ಲಿ ಶವಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.