ತಿರುಪತ್ತೂರು(ತಮಿಳುನಾಡು): 15 ವರ್ಷದ ಹಿಂದೆ ಬಾಗಲಕೋಟೆ ಜಿಲ್ಲೆಯ ಕಂದಗಲ್ ಗ್ರಾಮದ ನಿವಾಸಿ ರಾಜ್ ಮೊಹಮ್ಮದ್ (ಪ್ರಸ್ತುತ 46 ವಯಸ್ಸು) ಕಾಣೆಯಾದಾಗ ಅವರಿಗಾಗಿ ಕುಟುಂಬ ಹುಡುಕದ ಜಾಗವಿಲ್ಲ. ಈ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದರು. ಪೊಲೀಸರು ಕೂಡ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಹುಡುಕಲು ಅವಿರಹಿತ ಪ್ರಯತ್ನ ನಡೆಸಿ ಬಳಿಕ ಪ್ರಕರಣವನ್ನು ಕೈಬಿಟ್ಟಿದ್ದರು. ಕುಟುಂಬಸ್ಥರಿಗೂ ಕೂಡ ರಾಜ್ ಮತ್ತೆ ಸಿಗುತ್ತಾರೆ ಎಂಬ ಭರವಸೆ ಇರಲಿಲ್ಲ. ಆದರೆ, ಇದೀಗ ಕಳೆದುಹೋದ ವ್ಯಕ್ತಿ ಅಚಾನಕ್ ಆಗಿ ತಮಿಳುನಾಡಿನಲ್ಲಿ ಪತ್ತೆಯಾಗಿರುವ ಸಂಬಂಧ ಕರೆ ಬಂದಿದ್ದು, ಕುಟುಂಬಸ್ಥರಲ್ಲಿ ಹರ್ಷದ ಜೊತೆ ಅಚ್ಚರಿ ಕೂಡ ವ್ಯಕ್ತವಾಗಿದೆ.
ಏನಿದು ಕಥೆ: ಮೊದಲ ಕೋವಿಡ್ ಅಲೆಯಲ್ಲಿ ದೇಶವೇ ಲಾಕ್ ಡೌನ್ ಆದ ಸಂದರ್ಭದಲ್ಲಿ 2020ರ ಜೂನ್ 6ರಂದು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವಲಜಾ ಎಂಬ ಸ್ಥಳದಲ್ಲಿ ರಾಜ್ ಮೊಹಮ್ಮದ್ ಅಲೆದಾಡುತ್ತಿದ್ದರು. ಹೀಗಾಗಿ ಅವರನ್ನು ವೈದ್ಯರು ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
ಆ ಸಂದರ್ಭದಲ್ಲಿ ರಾಜ್ ಮೊಹಮ್ಮದ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಸ್ಥಿಮಿತ ಕಳೆದುಕೊಂಡಿದ್ದರು. ಈ ಹಿನ್ನೆಲೆ ವೈದ್ಯರು ತಿರುಪತ್ತೂರು ಮಾನಸಿಕ ಅಸ್ವಸ್ಥರಿಗಾಗಿ ಇದ್ದ ‘ಉಧವುಮ್ ಉಲ್ಲಂಗಲ್' ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.