ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ನ ಎರಡನೇ ಆರೋಪಿ ಆಗಿರುವ ಕನ್ನಡದ ಜನಪ್ರಿಯ ನಟ ದರ್ಶನ್ ಅವರ ಆರೋಗ್ಯ ತಪಾಸಣೆಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಅವರ ಚಲನವಲನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ನಟ ದರ್ಶನ್ ಅವರ ಆರ್ಆರ್ ನಗರದ ನಿವಾಸದ ಬಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಸಾಧ್ಯತೆ ಇರುವುದರಿಂದ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು, ದರ್ಶನ್ ಅವರ ಮನೆಯ ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ನಿವಾಸದ ಬಳಿ 2 ಕೆಎಸ್‌ಆರ್‌ಪಿ ತುಕಡಿ, ಸ್ಥಳೀಯ ಪೊಲೀಸರು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಸದ್ಯ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿಯ ನಿವಾಸದಲ್ಲಿರುವ ನಟ ದರ್ಶನ್, ಇಂದು ತಮ್ಮ ಮಗನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಕೆಲ ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ದರ್ಶನ್ ಪರ ವಕೀಲರು, ಪತ್ನಿ ಮತ್ತು ಸಹೋದರ ಇದಕ್ಕಾಗಿ ಸಾಕಷ್ಟು ಓಡಾಡಿದ್ದರು. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದ ದರ್ಶನ್ ಅವರನ್ನು ಹಲವು ಬಾರಿ ಭೇಟಿಯಾಗಿ ಧೈರ್ಯ ತುಂಬಿದ್ದರು. ಅಂತಿಮವಾಗಿ, ಕಳೆದ ದಿನ ಮಧ್ಯಂತರ ಜಾಮೀನು ಮಂಜೂರಾಯಿತು. ಆರೋಪಿಯ ಆರೋಗ್ಯ ತಪಾಸಣೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ 8 ಷರತ್ತುಗಳನ್ನು ವಿಧಿಸಿ ಮಧ್ಯಂತರ ಜಾಮೀನು ಮಂಜೂರು ಮಾಡಿತು.