ಬೆಳಗಾವಿ: ಕಳೆದ 11 ದಿನಗಳಿಂದ ಬೆಳಗಾವಿಯಲ್ಲಿ ಸಾರ್ವಜನಿಕ ಮಂಡಳಿಗಳು ಹಾಗೂ ಮನೆಗಳಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ ಭಕ್ತರು, ಇಂದು ಅಂತಿಮ ವಿದಾಯ ಹೇಳಲು ಸಜ್ಜಾಗಿದ್ದಾರೆ. ನಗರದಲ್ಲಿ 390ಕ್ಕೂ ಅಧಿಕ ಸಾರ್ವಜನಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಗಾವಿ ಅಷ್ಟೇ ಅಲ್ಲದೇ ಪಕ್ಕದ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಗಣೇಶನ ದರ್ಶನಕ್ಕೆ ಲಕ್ಷಾಂತರ ಭಕ್ತರ ದಂಡೇ ಹರಿದು ಬಂದಿತ್ತು. 11 ದಿನಗಳ ಭಕ್ತಿಯಿಂದ ಧಾರ್ಮಿಕ ವಿಧಿ ಕೈಗೊಂಡ ಭಕ್ತರು, ಇಂದು ಮಂಗಳವಾರ ಮೋದಕ ಪ್ರಿಯನಿಗೆ ಬೀಳ್ಕೊಡಲಿದ್ದಾರೆ.
ಭವ್ಯ ಮೆರವಣಿಗೆ:ಬೆಳಗಾವಿಯ ಹುತಾತ್ಮ ಚೌಕ್‌ನಲ್ಲಿ ಸಂಜೆ 5ಕ್ಕೆ ಆರಂಭಗೊಳ್ಳುವ ಸಾರ್ವಜನಿಕ ಮೂರ್ತಿಗಳ ಭವ್ಯ ಮೆರವಣಿಗೆ ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ ರಸ್ತೆ, ಟಿಳಕ ಚೌಕ್, ಹೆಮು ಕಲಾನಿ ಚೌಕ್, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಾಗಿ, ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡಕ್ಕೆ ಬಂದು ತಲುಪಲಿದೆ. ಮೆರವಣಿಗೆ ಉದ್ದಕ್ಕೂ ರೂಪಕಗಳು, ವಿವಿಧ ಕಲಾತಂಡಗಳು ಕಣ್ಮನ ಸೆಳೆಯಲಿವೆ.
8 ಕಡೆ ನಿಮಜ್ಜನಕ್ಕೆ ವ್ಯವಸ್ಥೆ:ಬೆಳಗಾವಿ ನಗರದ ಶಹಾಪುರದ ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡ, ಹಳೆಯ ಹೊಂಡ, ಜಕ್ಕೇರಿ ಹೊಂಡ, ಕೋಟೆ ಕೆರೆ, ಕಣಬರ್ಗಿ ಕೆರೆ, ಅನಗೋಳದ ಲಾಲ್ ತಾಲಾಬ್, ಮಜಗಾವಿ ಕೆರೆ, ವಡಗಾವಿಯ ನಾಜರ್‌ಕ್ಯಾಂಪ್ ಸೇರಿ 8 ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ನೀರಲ್ಲಿ ಬೃಹದಾಕಾರದ ಮೂರ್ತಿಗಳನ್ನು ಮುಳುಗಿಸಲು ಕ್ರೇನ್ ಬಳಸಲಾಗುತ್ತಿದೆ. ಅಲ್ಲದೇ ಈಜುಪಟುಗಳನ್ನು ಕೂಡ ನಿಯೋಜಿಸಿದ್ದೇವೆ. ಧರ್ಮವೀರ ಸಂಭಾಜಿ ವೃತ್ತದ ಬಳಿ ವೀಕ್ಷಕರ ಗ್ಯಾಲರಿಯನ್ನೂ ನಿರ್ಮಿಸಲಾಗಿದೆ. ಯಾವುದೇ ರೀತಿ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆ ಕೈಗೊಂಡಿದ್ದೇವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ತಿಳಿಸಿದರು.