ಬೆಂಗಳೂರು: "ಮೈಸೂರು ಕೊಡುಗು ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಈಗಾಗಲೇ ಪಕ್ಷ ಸೇರ್ಪಡೆಯಾಗಿದ್ದಾರೆ. ಪಕ್ಷದ ಸಿದ್ಧಾಂತ ಒಪ್ಪಿ ಸದಸ್ಯತ್ವ ಪಡೆದುಕೊಂಡ ನಂತರವೇ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಪಕ್ಷ ಸೇರ್ಪಡೆಯಂತಹ ಕಾರ್ಯಕ್ರಮವನ್ನು ಮಾತ್ರ ನಡೆಸಿಲ್ಲ, ಸಾರ್ವಜನಿಕವಾಗಿ ಕಾರ್ಯಕ್ರಮದ ಮೂಲಕ ಪಕ್ಷ ಸೇರ್ಪಡೆ ಮಾತ್ರ ಬಾಕಿ ಇದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಯಾವ ಕ್ಷಣದಲ್ಲಾದರೂ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ನಿನ್ನೆ ನಮ್ಮ ವರಿಷ್ಠರು 28 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದಾರೆ. ಕೆಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆಯಾಗಿದೆ. ಇದರ ಜೊತೆಗೆ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಕಳೆದ ಒಂದು ತಿಂಗಳು ನಮ್ಮ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಮೂರು ಜನ ವೀಕ್ಷಕರನ್ನು ಕಳುಹಿಸಿಕೊಟ್ಟು ಅಲ್ಲಿ ಜಿಲ್ಲೆಯ ಪ್ರಮುಖರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ನಂತರ ಕೋರ್ ಕಮಿಟಿಯಲ್ಲಿ ಚರ್ಚಿಸಿ ಪ್ರತಿ ಕ್ಷೇತ್ರದಲ್ಲಿ 2-3 ಹೆಸರು ಕಳಿಸಿಕೊಟ್ಟಿದ್ದೆವು. ದೆಹಲಿಯಲ್ಲಿಯೂ ವರಿಷ್ಠರ ಸಮಕ್ಷಮದಲ್ಲಿ ಚರ್ಚಿಸಿ ಅಂತಿಮವಾಗಿ 20 ಹೆಸರು ಬಿಡುಗಡೆಯಾಗಿದೆ. ಹೊಸ ಮುಖಗಳಿಗೆ ಅವಕಾಶ ಸಿಕ್ಕಿದೆ. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡುವ ಕೆಲಸವಾಗಿದೆ." ಎಂದರು.
"ಮೈಸೂರು ಕೊಡಗು ಕ್ಷೇತ್ರದ ಜನರಲ್ಲಿ ಮೈಸೂರು ರಾಜಮನೆತನದ ಬಗ್ಗೆ ಗೌರವ ಪ್ರೀತಿ ಇದೆ. ಇಡೀ ದೇಶದಲ್ಲಿ ತಮ್ಮ ಸರ್ವಸ್ವ ಸಮರ್ಪಿಸಿ ಪ್ರಜಾಸೇವೆ, ನಾಡಿನ ಸೇವೆ ಮಾಡಿದ ಕೀರ್ತಿ ಮೈಸೂರಿನ ಯದುವಂಶಕ್ಕೆ ಸಲ್ಲಲಿದೆ. ರಾಜಮನೆತನದ ಕುಡಿ ಯದುವೀರ್ ಒಡೆಯರ್ ಅವರನ್ನು ಮೈಸೂರು ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅವರಿಗೆ ರಾಜ್ಯದಿಂದ ಅಭಿನಂದನೆ ಸಲ್ಲಿಸಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಈ ಚುನಾವಣೆ ಎದುರಿಸುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರಕ್ಕೆ ಅಚ್ಚರಿ ಆಯ್ಕೆ ಮಾಡಲಾಗಿದೆ. ಡಾ.ಮಂಜುನಾಥ್ ಅವರನ್ನು ಆಯ್ಕೆ ಮಾಡಿದೆ" ಎಂದರು.
"ಎರಡು ಗುರಿ ನಮ್ಮ ಮುಂದಿದೆ. ಮೊದಲ ಆದ್ಯತೆ ಲೋಕಸಭಾ ಚುನಾವಣೆಯಲ್ಲಿ ಮಿತ್ರಪಕ್ಷ ಒಟ್ಟಾಗಿ ಚುನಾವಣೆ ಎದುರಿಸಿ ಹೊಸ ದಾಖಲೆ ಸೃಷ್ಟಿಸಬೇಕು. 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೇಶದ ಹೆಮ್ಮೆಯ ಪ್ರಧಾನಿ ಮೋದಿ ಕೈ ಬಲಪಡಿಸಬೇಕು. ಅದಕ್ಕಾಗಿ ರಾಜ್ಯದಿಂದ ದೊಡ್ಡ ಕೊಡುಗೆ ಕೊಡಬೇಕು ಎಂದು ಉತ್ತಮ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಯಾರೋ ಒಬ್ಬರು ಕುಳಿತು ಮಾಡಿರುವ ತೀರ್ಮಾನ ಇದಲ್ಲ. ನಮ್ಮ ಕೇಂದ್ರದ ವರಿಷ್ಠರು ಎಲ್ಲರೂ ಚರ್ಚಿಸಿ ಚಿಂತನೆ ಮಾಡಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮಾಡಿರುವ ಆಯ್ಕೆಯಾಗಿದೆ" ಎಂದರು.