ಬೆಳ್ತಂಗಡಿ (ದಕ್ಷಿಣ ಕನ್ನಡ):ಹಬ್ಬಕ್ಕೆಂದು ಬಂದಿದ್ದ ಯುವಕರು ಮಧ್ಯಾಹ್ನ ಊಟದ ಬಳಿಕ ನದಿಗೆ ಸ್ನಾನಕ್ಕೆಂದು ಹೋದಾಗ ನೀರುಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಡ್ತಿಕಲ್ಲು ಎಂಬಲ್ಲಿ ಬುಧವಾರ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ವೇಣೂರು ಚರ್ಚ್ನ ವಾರ್ಷಿಕ ಹಬ್ಬಕ್ಕೆಂದು ಬಂದಿದ್ದ ಕುಪ್ಪಪೆದವು ನಿವಾಸಿ ಲಾರೆನ್ಸ್ (20), ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ (19) ಹಾಗೂ ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಊಟ ಮುಗಿಸಿ ಮೂಡುಕೋಡಿ ಗ್ರಾಮದ ನಡ್ತಿಕಲ್ಲು ಬರ್ಕಜೆ ಡ್ಯಾಂ ಬಳಿಯ ಗಗ್ಗರ ಎರುಗುಂಡಿ ಬಳಿ ಸ್ನಾನ ಮಾಡಲು ನದಿಗೆ ಇಳಿದಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರೂ ಯುವಕರು ನೀರುಪಾಲಾಗಿದ್ದಾರೆ. ಮೂವರ ಮೃತದೇಹಗಳನ್ನೂ ನೀರಿನಿಂದ ಹೊರತೆಗೆಯಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕರು ಮಂಗಳೂರಿನ ನರ್ಸಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕಲಬುರಗಿ ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶು ಅಪಹರಣ ಪ್ರಕರಣ: ತಾಯಿ ಮಡಿಲು ಸೇರಿದ ಕಂದಮ್ಮ