ದಾವಣಗೆರೆ:ಚಿಗಟೇರಿ ಜಿಲ್ಲಾಸ್ಪತ್ರೆಯ ಮೇಲ್ಛಾವಣಿ ಕಾಂಕ್ರೀಟ್ ಪದರ ಕಳಚಿ ಬಿದ್ದು ಎರಡು ವರ್ಷದ ಮಗು ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆಯಿತು. ವಿಜಯನಗರ ಜಿಲ್ಲೆಯ ಹಲವಾಗಲು ಗ್ರಾಮದ ನಿವಾಸಿಗಳಾದ ಪ್ರೇಮಾ (46), ಕಾವೇರಿ (36), ನೇತ್ರಾ (2) ಗಾಯಗೊಂಡಿದ್ದಾರೆ. ಮಗುವಿನ ತಲೆಗೆ ಹಾಗು ಇಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲು ಬಂದಿದ್ದಾಗ ತುರ್ತು ಚಿಕಿತ್ಸಾ ವಿಭಾಗದ ಬಳಿ ಘಟನೆ ನಡೆದಿದೆ.
ಚಿಗಟೇರಿ ಜಿಲ್ಲಾಸ್ಪತ್ರೆ ಮೇಲ್ಛಾವಣಿ ಕುಸಿದು ಮೂವರಿಗೆ ಗಾಯ (ETV Bharat) "ಜನರ ಪ್ರಾಣದ ಜೊತೆ ಚೆಲ್ಲಾಟ":ಸಾಮಾಜಿಕ ಹೋರಾಟಗಾರ ವಾಸು ಆವರಗೆರೆ ಪ್ರತಿಕ್ರಿಯಿಸಿ, "ಚಿಗಟೇರಿ ಜಿಲ್ಲಾಸ್ಪತ್ರೆಯ ಕಟ್ಟಡಕ್ಕೆ 48ರಿಂದ 50 ವರ್ಷವಾಗಿದೆ. ಮೇಲ್ಛಾವಣಿಯ ಕಾಂಕ್ರೀಟ್ ಪದರ ಕಳಚಿ ಬೀಳುತ್ತಿದೆ. ಇತ್ತೀಚಿಗೆ ರೋಗಿಗಳು, ಜನಸಾಮಾನ್ಯರ ಮೇಲೆ ಕಾಂಕ್ರೀಟ್ ಪದರಗಳು ಬಿದ್ದಿದ್ದು ಅನಾಹುತ ತಪ್ಪಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನದ ಪ್ರಸ್ತಾವನೆ ಸಲ್ಲಿಸಿದ್ದೇವೆ ಎನ್ನುವ ಅಧಿಕಾರಿಗಳು, ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅನಾಹುತ ಸಂಭವಿಸುವುದಕ್ಕೂ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಮನವಿ ಮಾಡಿದರು.
ಚಿಗಟೇರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ(ಡಿಎಸ್) ಡಾ.ನಾಗೇಂದ್ರಪ್ಪ ಪ್ರತಿಕ್ರಿಯಿಸಿ, "ತುರ್ತು ಚಿಕಿತ್ಸಾ ಘಟಕದ ಬಳಿ ಮೇಲ್ಛಾವಣಿ ಸಿಮೆಂಟ್ ಚಕ್ಕೆಗಳು ರೋಗಿಯೊಬ್ಬರನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ್ದ ಮೂವರ ಮೇಲೆ ಬಿದ್ದಿದ್ದರಿಂದ ಗಾಯಗಳಾಗಿವೆ. ಚಿಕ್ಕಪುಟ್ಟ ಗಾಯಗಳಾಗಿದ್ದರಿಂದ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಕಟ್ಟಡದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ಸರ್ಕಾರಕ್ಕೆ ₹27 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದಕ್ಕೆ ಅನುಮೋದನೆ ಸಿಕ್ಕಿ ಹಣ ಬಿಡುಗಡೆಯಾಗಬೇಕಿದೆ" ಎಂದರು.
ಇದನ್ನೂ ಓದಿ:ಹಾವೇರಿ: ಕಾಮಗಾರಿ ಪೂರ್ಣಗೊಂಡ ಶೌಚಾಲಯಗಳ ಉದ್ಘಾಟನೆ ವಿಳಂಬ, ಸಾರ್ವಜನಿಕರಿಗೆ ತೊಂದರೆ