ಕರ್ನಾಟಕ

karnataka

ETV Bharat / state

ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು; ಮಂಗಳೂರಲ್ಲಿ ದುರ್ಘಟನೆ - ENGINEERING STUDENTS DROWN IN SEA

ಸಮುದ್ರದಲ್ಲಿ ಈಜುವಾಗ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಸುರತ್ಕಲ್ ಬಳಿ ಸಂಭವಿಸಿದೆ.

ENGINEERING STUDENTS DROWN IN SEA
ಸಮುದ್ರ (ETV Bharat)

By ETV Bharat Karnataka Team

Published : Jan 8, 2025, 6:15 PM IST

ಮಂಗಳೂರು: ನಗರದ ಸುರತ್ಕಲ್​ನ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಈಜಲು ಇಳಿದಿದ್ದ ನಾಲ್ವರು ಯುವಕರ ಪೈಕಿ ಮೂವರು ‌ಸಮುದ್ರಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಇಂದು (ಬುಧವಾರ) ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್ ಎಸ್ (31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ (30) ಹಾಗೂ ಬೆಂಗಳೂರು ಜೆ.ಪಿ. ನಗರದ ನಿವಾಸಿ ಸತ್ಯವೇಲು (30) ಮೃತ ವಿದ್ಯಾರ್ಥಿಗಳು. ಬೀದರ್ ಜಿಲ್ಲೆಯ ಹಂಗರಗಾ ನಿವಾಸಿ ಪರಮೇಶ್ವರ್‌ (30) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಲ್ವರು ಬೆಂಗಳೂರಿನ ಎಎಂಸಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಪರಸ್ಪರ ಸ್ನೇಹಿತರಾಗಿದ್ದರು. ಇವರೆಲ್ಲರೂ ಮಂಗಳವಾರ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು, ಇಂದು ಬೆಳಗ್ಗೆ ಮಂಗಳೂರಿಗೆ ತಲುಪಿದ್ದರು. ಮಧ್ಯಾಹ್ನದ ವೇಳೆಗೆ ಕುಳಾಯಿಜೆಟ್ಟಿ ಬಳಿಗೆ ಬಂದ ಇವರು, ಸಮುದ್ರಕ್ಕೆ ಇಳಿದು ಆಡುತ್ತಿದ್ದ ಸಂದರ್ಭದಲ್ಲಿ ನೀರುಪಾಲಾಗಿದ್ದರು.

ಯುವಕರು ಸಮುದ್ರದ ಸೆಳೆತಕ್ಕೆ ಸಿಲುಕುತ್ತಿರುವುದನ್ನು ಗಮನಿಸಿದ ಸ್ಥಳೀಯ, ಮೀನುಗಾರರು ತಕ್ಷಣ ರಕ್ಷಣೆಗೆ ಮುಂದಾಗಿದರು. ಆದರೆ ಅಷ್ಟರಲ್ಲಾಗಲೇ ಮೂವರು ನೀರುಪಾಲಾಗಿದ್ದಾರೆ. ಓರ್ವನನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರ ಮೃತದೇಹಗಳು ಜೆಟ್ಟಿಯ ಬಲಭಾಗದ ಮೂಲೆಯಲ್ಲಿ ಪತ್ತೆಯಾಗಿವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ, ಸುರತ್ಕಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಹಜರು ನಡೆಸಿ ಎ.ಜೆ. ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಬಗ್ಗೆ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ''ನಾಲ್ವರು ಯುವಕರು ಸಮುದ್ರದಲ್ಲಿ ಈಜುತ್ತಿದ್ದ ವೇಳೆ ನೀರುಪಾಲಾಗಿದ್ದಾರೆ. ಇದರಲ್ಲಿ ಓರ್ವನನ್ನು ರಕ್ಷಿಸಲಾಗಿದೆ. ಉಳಿದ ಮೂವರು ಸಾವನ್ನಪ್ಪಿದ್ದಾರೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಯುವತಿಯನ್ನು ಮದುವೆ ಮಾಡಿಕೊಡುವಂತೆ ಕೇಳಲು ಹೋಗಿದ್ದ ವಿವಾಹಿತನ ಹತ್ಯೆ, ನಾಲ್ವರು ಸೆರೆ

ABOUT THE AUTHOR

...view details