ಕಲಬುರಗಿ:ಕಾಂಗ್ರೆಸ್ ಸೇರ್ಪಡೆಯಾಗಲು ಮೂವರು ಬಿಜೆಪಿ ಸಂಸದರು ಬಯಸಿದ್ದು, ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಹೆಸರನ್ನು ಬಹಿರಂಗಪಡಿಸಲಾಗದು. ಇನ್ನೂ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು. ಇದೇ ವೇಳೆ, ಸಂವಿಧಾನ ಬದಲಾವಣೆ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನಿ, ಸಂಸದರು ಮೌನವಾಗಿದ್ದಾರೆ ಎಂದರೆ ಮೌನಂ ಸಮ್ಮತಿ ಲಕ್ಷಣಂ ಅಂತಾನೇ ಅರ್ಥ ಅಲ್ವಾ? ಎಂದು ಪ್ರಶ್ನಿಸಿದರು. ಬಿಜೆಪಿಯ ಭಾವನೆಯೇ ಸಂಸದ ಅನಂತಕುಮಾರ್ ಹೆಗಡೆ ಅವರ ಬಾಯಿಂದ ಬಂದಿದೆ. ಇದರ ವಿರುದ್ದ ನಾವು ಹೋರಾಟಕ್ಕೆ ಕರೆ ಕೊಡುತ್ತೇವೆ, ಜನ ಸಂವಿಧಾನ ಬದಲಾವಣೆ ಹೇಳಿಕೆ ವಿರುದ್ದ ಹೋರಾಟ ಮಾಡಬೇಕು ಎಂದು ಹೇಳಿದರು.
ಬಳಿಕ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ನಾವು ಚುನಾವಣೆಗೋಸ್ಕರ ಗ್ಯಾರಂಟಿ ಕೊಟ್ಟಿಲ್ಲ, ಜನರ ಬದುಕಿಗಾಗಿ ಗ್ಯಾರಂಟಿ ತಂದಿದ್ದೇವೆ ಎಂದು ಪರೋಕ್ಷವಾಗಿ ಬಿಜೆಪಿ ಚುನಾವಣೆಗಾಗಿ ಗ್ಯಾರಂಟಿ ಮೊರೆ ಹೋಗಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ದೊಡ್ಡ ಆತ್ಮವಿಶ್ವಾಸದಿಂದ ಇಂದು ಕಲಬುರಗಿಯಲ್ಲಿ ಐದು ಗ್ಯಾರಂಟಿಗಳ ಸಂಪೂರ್ಣ ಅನುಷ್ಠಾನ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ, ಯಾವುದೇ ಪಕ್ಷ ಇರಲೀ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಬಜೆಟ್ನಲ್ಲೂ ಕೂಡ 52 ಸಾವಿರ ಕೋಟಿ ಗ್ಯಾರಂಟಿಗಳಿಗಾಗಿ ಮೀಸಲಿಟ್ಟಿದ್ದೇವೆ. ಇಡೀ ದೇಶದ ಜನ ಗ್ಯಾರಂಟಿ ಮೆಚ್ಚಿದ್ದಾರೆ. ಬಿಜೆಪಿ ಕೂಡ ಒಪ್ಪಿ ಮೋದಿ ಗ್ಯಾರಂಟಿ ಮಾಡಿದ್ದಾರೆ. ಬಿಜೆಪಿ ಅವರು ನಮ್ಮ ಗ್ಯಾರಂಟಿಯನ್ನ ಕಾಪಿ ಮಾಡ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.