ಡಿಸಿಪಿ ಲಕ್ಷ್ಮೀಪ್ರಸಾದ್ ಹೇಳಿಕೆ ಬೆಂಗಳೂರು:ಸಹೋದರಿಗೆ ಸಂದೇಶ ಕಳುಹಿಸುತ್ತಿದ್ದ ಶಂಕೆ ಮೇರೆಗೆ ಯುವಕನ ಹತ್ಯೆಗೆ ಸುಪಾರಿ ನೀಡಿದ್ದ ಯುವತಿ ತಮ್ಮ ಸೇರಿ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜತೆಗೆ ಈ ಪ್ರಕರಣದಲ್ಲಿ ಕೃತ್ಯದಲ್ಲಿ ಶಾಮೀಲಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಮೂವರನ್ನು ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಿ ಬಾಲಮಂದಿರಕ್ಕೆ ಬಿಡಲಾಗಿದೆ. ಹೇಮಂತ್ ರೆಡ್ಡಿ (20) ಬಾಲಾಜಿ (20 ) ಹಾಗೂ ಗಗನ್ (19) ಬಂಧಿತರು. ಆರೋಪಿಗಳಿಂದ ಟಾಟಾ ಸುಮೋ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ಮೂಲದ ಕಿಶೋರ್ ಎನ್ನುವಾತ ಬೆಂಗಳೂರು ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಮೊದಲ ಆರೋಪಿ ಹೇಮಂತ್ ರೆಡ್ಡಿ ಸಹೋದರಿಯ ಪರಿಚಯವಾಗಿತ್ತು. ಕೆಲ ತಿಂಗಳ ಹಿಂದೆ ಇಬ್ಬರು ಕೆಲಸ ತೊರೆದಿದ್ದರು. ಈ ಮಧ್ಯೆ ಯುವತಿಗೆ ಕಿಶೋರ್ ಮೆಸೇಜ್ ಮಾಡುತ್ತಿರುವುದು ಹೇಮಂತ್ ಗಮನಕ್ಕೆ ಬಂದಿದೆ. ಇದರಿಂದ ಅಸಮಾಧಾನಗೊಂಡ ಹೇಮಂತ್ ಕಿಶೋರ್ ಹತ್ಯೆಗೆ ತನ್ನ ಸಹಚರರಿಗೆ 3 ಲಕ್ಷ ಸುಪಾರಿ ಹಣ ನೀಡಿದ್ದ.
ಏಪ್ರಿಲ್ 15 ರಂದು ರಾತ್ರಿ 12 ಗಂಟೆಗೆ ಪಿಎಸ್ಐ ಶಿವಣ್ಣ ಅವರು ಗಸ್ತಿನಲ್ಲಿದ್ದರು. ಗಂಟಿಗಾನಹಳ್ಳಿ ಬಳಿಯ ಜಿಸಿಬಿಸಿ ಅಪಾರ್ಟ್‌ಮೆಂಟ್ ಬಳಿಯ ರಸ್ತೆ ಪಕ್ಕದ ಕತ್ತಲು ಪ್ರದೇಶದಲ್ಲಿ ಮಂಕಿ ಕ್ಯಾಪ್ ಧರಿಸಿದ ಐವರು ಅಪರಿಚಿತರು ಟಾಟಾ ಸುಮೋ ವಾಹನ ನಿಲ್ಲಿಸಿಕೊಂಡು ಕುಳಿತಿರುವುದು ಕಂಡು ಬಂದಿದೆ. ಈ ವೇಳೆ ಅವರನ್ನು ಸುತ್ತುವರೆದು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ಹಾರೋಹಳ್ಳಿಯ ಸಾಯಿಗ್ರೀನ್ ಪಾರ್ಕ್ ಲೇಔಟ್ ನಿವಾಸಿ ಕಿಶೋರ್ ಎಂಬಾತನ ಕೊಲೆಗೆ ಹೇಮಂತ್ ರೆಡ್ಡಿಯಿಂದ ಸುಪಾರಿ ಪಡೆದಿದ್ದು, ಕೊಲೆಗೆ ಸಂಚು ರೂಪಿಸಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಬಳಿಕ ಆರೋಪಿಗಳನ್ನು ಠಾಣೆಗೆ ಕರೆ ತಂದು ಪ್ರಕರಣ ದಾಖಲಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ:ಧಾರವಾಡ; ಮನೆಯೊಂದರಲ್ಲಿ ಭಾರಿ ಪ್ರಮಾಣದ ನಗದು ಪತ್ತೆ - Cash Seized