ಧಾರವಾಡ :ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮೂವರನ್ನು ಬಂಧಿಸಿರುವ ಘಟನೆ ಇಲ್ಲಿನ ಐಸ್ಗೇಟ್ ಬಳಿ ನಡೆದಿದೆ.
ಡಿ ಆರ್ ಪೊಲೀಸ್ ಕಾನ್ಸ್‌ಟೇಬಲ್ ಬಸವರಾಜ ಕಮತರ ಹಲ್ಲೆಗೊಳಗಾದವರು. ಇಕ್ಬಾಲ್, ಅಮೀರ್ ಮತ್ತು ಅಜಮರ್ ಮುಲ್ಲಾ ಹಲ್ಲೆ ಮಾಡಿದ ಆರೋಪಿಗಳು. ಮೂವರು ಸೇರಿಕೊಂಡು ಬ್ಲೆಡ್ನಿಂದ ಮುಖದ ನಾಲ್ಕು ಭಾಗಗಳಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಪೊಲೀಸ್ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಡಿಸಿಪಿ ಮಹಾನಿಂಗ ನಂದಗಾವಿ ಅವರು ಮಾತನಾಡಿದರು (ETV Bharat) ಸದ್ಯ ಪೊಲೀಸ್ ಕಾನ್ಸ್‌ಟೇಬಲ್ ಬಸವರಾಜ್ ಕಮತರ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧಾರವಾಡ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಮೂವರ ವಿರುದ್ಧ ಸೆಕ್ಷನ್ 307ರ ಅಡಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.
ಪ್ರಕರಣದ ಕುರಿತು ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದ್ದೇನು? : ''ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿನ್ನೆ (ದಿನಾಂಕ 10-11-24) ಒಂದು ಪ್ರಕರಣ ದಾಖಲಾಗಿದೆ. ಇದರಲ್ಲಿ ಫಿರ್ಯಾದಿ ಮತ್ತು ಆರೋಪಿಗಳ ನಡುವೆ ಬೈಕ್ ಹಾಗೂ ಕಾರುಗಳ ನಡುವೆ ಟಚ್ ಆದ ವಿಷಯಕ್ಕೆ ಸಂಬಂಧಿಸಿದಂತೆ ಅವರ ನಡುವೆ ಗಲಾಟೆಯಾಗಿದೆ. ಈ ವೇಳೆ ಫಿರ್ಯಾದಿದಾರನಿಗೆ ಗಾಯವಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ನಾವು ಮೂವರು ಆರೋಪಿಗಳನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ'' ಎಂದು ಹೇಳಿದ್ದಾರೆ.
''ಫಿರ್ಯಾದಿ ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಕಾರಿನಲ್ಲಿ ಇದ್ದರು. ಕಾರನ್ನು ಪಕ್ಕಕ್ಕೆ ಸರಿಸಿ ದಾರಿ ಬಿಡಿ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇವರ ನಡುವೆ ಮಾತಿಗೆ ಮಾತು ನಡೆದು ಗಲಾಟೆಯಾಗಿದೆ. ಆರೋಪಿಗಳು ಕೂಡ ಪ್ರತಿದೂರು ನೀಡಿದ್ದಾರೆ. ಎನ್ಸಿ ಇರುವುದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲು ಮಾಡುತ್ತೇವೆ'' ಎಂದಿದ್ದಾರೆ.
ಇದನ್ನೂ ಓದಿ :ಕಾರವಾರ: ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ, ಆರೋಪಿ ವಶಕ್ಕೆ