ಬೆಳಗಾವಿ:ಬೆಳಗಾವಿ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೂವರನ್ನು ಹಿಂಡಲಗಾದಲ್ಲಿರುವ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ಉದ್ಯಮಿ ಪತ್ನಿ ಉಮಾ ಪದ್ಮಣ್ಣವರ (41), ಅವರ ಫೇಸ್‌ಬುಕ್ ಸ್ನೇಹಿತ, ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದ ಶೋಭಿತ್ ಗೌಡ (30) ಮತ್ತು ಪವನ್ (27) ಬಂಧಿತ ಆರೋಪಿಗಳು. ಕೊಲೆ ಪ್ರಕರಣದಲ್ಲಿ ಮನೆಗೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಅವರ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿಲ್ಲ. ಹಾಗಾಗಿ, ಅವರನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆ ಕೊಲೆ ಬಗ್ಗೆ ಮಗಳಿಂದಲೇ ದೂರು: ಅಕ್ಟೋಬರ್ 9ರಂದು ಬೆಳಗಾವಿ ಆಂಜನೇಯ ನಗರದ ನಿವಾಸಿ ಸಂತೋಷ ಪದ್ಮಣ್ಣವರ ಸಾವನ್ನಪ್ಪಿದ್ದರು. ಬಳಿಕ ಅ.10ರಂದು ಸದಾಶಿವನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ, ಬಳಿಕ ತಂದೆಯ ಸಾವಿನ ಬಗ್ಗೆ ಅನುಮಾನದ ಮೇಲೆ ಮಗಳು ಸಂಜನಾ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ತಂದೆಯ ಮನೆಗೆ ಯಾರೆಲ್ಲಾ ಬಂದಿದ್ದರು ಎಂದು ಸಂಜನಾ ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡಿದ್ದಾರೆ. ಆದರೆ, ಕೆಲವು ದೃಶ್ಯಗಳು ಡಿಲೀಟ್ ಆದ ಹಿನ್ನೆಲೆ ಅನುಮಾನಗೊಂಡ ಸಂಜನಾ, ಅಕ್ಟೋಬರ್ 15ರಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಂದೆಯ ಸಾವಿನ ಬಗ್ಗೆ ಅನುಮಾನವಿದ್ದು, ತನಿಖೆ ನಡೆಸಬೇಕು ಎಂದು ದೂರು ನೀಡಿದ್ದರು.