ಬೆಂಗಳೂರು:ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇಂದು ನಗರದ ಹಲವೆಡೆ ನಡೆಯಿತು. ವಿವಿಧ ಸಂಘ-ಸಂಸ್ಥೆಗಳು ಹಾಗೂ ಸರ್ಕಾರದ ವತಿಯಿಂದ ಇಡೀ ದಿನ ಯೋಗದ ಮಹತ್ವ ಸಾರುವ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಯೋಗ ದಿನವನ್ನು ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುತ್ತಿದೆ. 10 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಈ ದಿನವನ್ನು 'ಅಂತಾರಾಷ್ಟ್ರೀಯ ಯೋಗ ದಿನ'ವನ್ನಾಗಿ ಘೋಷಿಸಿದ್ದರು. ಈ ದಿನಕ್ಕೆ ವಿಶ್ವ ಸಂಸ್ಥೆಯ ಮಾನ್ಯತೆ ಕೂಡಾ ದೊರೆತಿದ್ದು, ಅಂದಿನಿಂದ ಯೋಗಾಸಕ್ತರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಸಾವಿರಾರು ಅಕಾಡೆಮಿಗಳು ಸಹ ತಲೆಯೆತ್ತಿವೆ. ಈ ಅಕಾಡೆಮಿಗಳು ನಿಂತರವಾಗಿ ಯೋಗ ಶಿಕ್ಷಣ ತರಬೇತಿ ನೀಡುತ್ತಿವೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ETV Bharat) ಶಂಕರ ಯೋಗ ಶಾಲಾ ಸಂಸ್ಥಾಪಕಿ ಜಿ.ಸತ್ಯಪ್ರಿಯ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿ, "ಯೋಗ ದಿನದ ಘೋಷಣೆಗೂ ಮುನ್ನ ಕೆಲವೇ ಕೆಲವು ಜನ ಯೋಗಾಸನಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಆದರೆ ವಿಶ್ವ ಮನ್ನಣೆ ಸಿಕ್ಕ ಮೇಲೆ ಭಾರತದ ಪುರಾತನ ಜೀವನ ಪದ್ಧತಿಗೆ ಹೊಸ ಕಳೆ ಬಂದಿದೆ. ಶಾಲೆಗಳಲ್ಲೂ ಯೋಗವನ್ನು ಕಡ್ಡಾಯವಾಗಿ ಹೇಳಿಕೊಡಲಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳಲ್ಲೂ ಸಹ ಇದರ ಬಗ್ಗೆ ಜಾಗೃತಿ ಮೂಡಿದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಜನರ ಆಸಕ್ತಿ ಕಡಿಮೆ" ಎಂದು ತಿಳಿಸಿದರು.
"ನಮ್ಮಲಿಯೇ ಹುಟ್ಟಿ ಬೆಳೆದಿರುವ ಯೋಗಕ್ಕೆ ಇನ್ನಷ್ಟು ಪ್ರಾಮುಖ್ಯತೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಘ-ಸಂಸ್ಥೆಗಳು ನೀಡಬೇಕು. ದೊಡ್ಡ ದೊಡ್ಡ ಅಕಾಡೆಮಿಗಳು ನಗರದಲ್ಲಿ ತಲೆಯೆತ್ತಿವೆ. ಆದರೆ ಜನರು ಯೋಗ ಕಲಿಯಲು ಹೆಚ್ಚಿನ ಹಣ ನೀಡಲು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಹಲವೆಡೆ ಫ್ರಾಂಚೈಸಿ ನೀಡುತ್ತಿದ್ದರೂ ಅದನ್ನು ಪಡೆದು ತರಗತಿಗಳನ್ನು ನಡೆಸಲು ಕಷ್ಟಸಾಧ್ಯ" ಎಂದು ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ETV Bharat) "ಕೆಲವರು ಅತ್ಯಂತ ಆಸಕ್ತಿಯಿಂದ ಯೋಗಾಭ್ಯಾಸ ಮಾಡಿ ಮುಂದಿನ ಪೀಳಿಗೆಗೆ ತಲುಪಿಸಲು ಶಿಕ್ಷಕರಾಗಲು ಬಯಸಿ ಬರುತ್ತಾರೆ. ಅಂತಹ ಆಸಕ್ತರಿಗೆ ತರಬೇತಿ ನೀಡಿ ಸರ್ಟಿಫಿಕೇಟ್ ನೀಡುವ ಕೆಲಸವನ್ನು ನಮ್ಮನ್ನೂ ಸೇರಿದಂತೆ ಹಲವು ಅಕಾಡೆಮಿಗಳು ಮಾಡುತ್ತಿವೆ. ಆದರೆ ಇದಕ್ಕೂ ಕೂಡ ಹಲವು ತೊಡಕುಗಳಿದ್ದು, ಅದನ್ನು ಆಯುಷ್ ಇಲಾಖೆ ನಿವಾರಿಸಿ ಬೇರೆ ಡಿಗ್ರಿ ಮತ್ತು ಡಿಪ್ಲೋಮಾ ಮಾದರಿಯಲ್ಲಿ ಮಾನ್ಯತೆ ನೀಡಬೇಕಿದೆ. ಸದ್ಯ ವಿವೇಕಾನಂದ ಯೋಗ ಕೇಂದ್ರದಂತಹ ಸಂಸ್ಥೆಗಳು ಹಾಗೂ ಜೈನ್ ವಿಶ್ವವಿದ್ಯಾಲಯ ಡಿಪ್ಲೋಮಾ ಮಾದರಿಯಲ್ಲಿ ಸರ್ಟಿಫಿಕೇಟ್ ನೀಡುತ್ತಿದ್ದು, ಅಂತಹ ಸಂಸ್ಥೆಗಳ ಜೊತೆಗೂಡಿ ಶಿಕ್ಷಕರಿಗೆ ತರಬೇತಿ ಮತ್ತು ಪ್ರಮಾಣಪತ್ರ ನೀಡುವ ಕಾರ್ಯವನ್ನೂ ಪ್ರಾರಂಭಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ರಾಜ್ಯದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿಧಾನಸೌಧ ಮುಂಭಾಗ ರಾಜ್ಯಪಾಲರಿಂದ 'ಯೋಗೋತ್ಸವ' ಉದ್ಘಾಟನೆ - International Day of Yoga