ಕರ್ನಾಟಕ

karnataka

ETV Bharat / state

ಆನ್‌ಲೈನ್ ವೈದ್ಯಕೀಯ ಸೌಲಭ್ಯ ಜಾರಿಗೊಳಿಸಲು ಚಿಂತನೆ: ಸಂಸದ ಡಾ.ಸಿ.ಎನ್. ಮಂಜುನಾಥ್ - MP DR C N MANJUNATH

ಗ್ರಾಮೀಣ ಭಾಗಕ್ಕೂ ಆನ್‌ಲೈನ್ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಾಗಿ ಈ ಯೋಜನೆ ಆರಂಭಿಸಲಾಗುತ್ತಿದ್ದು, ಅದಕ್ಕೆ ರಾಮನಗರ ಜಿಲ್ಲಾಸ್ಪತ್ರೆಯನ್ನು ನೋಡಲ್ ಆಸ್ಪತ್ರೆ ಮಾಡಲಾಗುವುದು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

MP Dr. C.N. Manjunath
ಸಂಸದ ಡಾ.ಸಿ.ಎನ್. ಮಂಜುನಾಥ್ (ETV Bharat)

By ETV Bharat Karnataka Team

Published : Jan 18, 2025, 10:31 PM IST

ರಾಮನಗರ:ರಾಮನಗರ ಜಿಲ್ಲೆಯ ನಾಗರಿಕರಿಗೆ ಸಕಾಲದಲ್ಲಿ ಉತ್ತಮ ಚಿಕಿತ್ಸೆ ದೊರೆಯಲು ಅನುಕೂಲವಾಗುವಂತಹ ಆನ್‌ಲೈನ್ ವೈದ್ಯಕೀಯ ಸಲಹೆ (ಟೆಲಿಮೆಡಿಸನ್) ಮಾದರಿಯಲ್ಲಿ ಜಿಲ್ಲೆಯಲ್ಲಿ ಆನ್‌ಲೈನ್ ವೈದ್ಯಕೀಯ ಸೌಲಭ್ಯ ಜಾರಿಗೊಳಿಸಲು ಚಿಂತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್. ಮಂಜುನಾಥ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

"ಗ್ರಾಮೀಣ ಭಾಗಕ್ಕೂ ಆನ್‌ಲೈನ್ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಾಗಿ ಈ ಯೋಜನೆ ಆರಂಭಿಸಲಾಗುತ್ತದೆ. ಅದಕ್ಕೆ ರಾಮನಗರ ಜಿಲ್ಲಾಸ್ಪತ್ರೆಯನ್ನು ನೋಡಲ್ ಆಸ್ಪತ್ರೆ ಮಾಡಲಾಗುವುದು, ಅಲ್ಲಿ ರೊಟೇಷನ್ ಮಾದರಿಯಲ್ಲಿ ತಜ್ಞ ವೈದ್ಯರನ್ನು ವೈದ್ಯಕೀಯ ಸಲಹೆ ನೀಡಲು ನಿಯೋಜನೆ ಮಾಡಬೇಕು" ಎಂದು ಹೇಳಿದರು.

"ಜಿಲ್ಲಾಸ್ಪತ್ರೆಯನ್ನೇ ಮುಖ್ಯ ಕೇಂದ್ರವನ್ನಾಗಿಸಿ, ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಸೌಲಭ್ಯ ಒದಗಿಸಿಕೊಡಬೇಕು. ಇದಕ್ಕೆ ಅಗತ್ಯವಾಗಿರುವ ಟ್ಯಾಬ್ ಖರೀದಿಸಿ ಎರಡು ಅಥವಾ ಮೂರು ತಿಂಗಳ ಅವಧಿಯಲ್ಲಿ ಯೋಜನೆ ಜಾರಿಗೊಳ್ಳಬೇಕು" ಎಂದು ಸೂಚಿಸಿದರು.

30 ಲಕ್ಷ ರೂ. ವ್ಯಯಿಸಿ ದುರಸ್ತಿ:"ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಂಜೆ 4.30 ನಂತರ ರೋಗಿಗಳ ಸೇವೆಗೆ ವೈದ್ಯರು ಲಭ್ಯರಿರಬೇಕು, ತಜ್ಞ ವೈದ್ಯರು ಕೂಡ ಕೆಲವು ವಾರ್ಡುಗಳಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಬೇಕು. ಜಿಲ್ಲೆಯ ರಾಮನಗರ ಮಾಗಡಿ ಹಾಗೂ ಕನಕಪುರದಲ್ಲಿ ಹಾರ್ಟ್​ ಅಟ್ಯಾಕ್ ಆದಾಗ ಗೋಲ್ಡನ್ ಅವರ್‌ನಲ್ಲಿ ನೀಡಲಾಗುವ 18 ಸಾವಿರ ರೂ.ಗಳ ಇಂಜಕ್ಷನ್ ಇರುವ ಬಗ್ಗೆ ಖಾತರಿ ಪಡಿಸಿಕೊಂಡರು, ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನ್ ಯಂತ್ರವನ್ನು 30 ಲಕ್ಷ ರೂ.ಗಳನ್ನು ವ್ಯಯಿಸಿ ದುರಸ್ತಿ ಪಡಿಸಲಾಗಿದೆ. ಮುಂದೆ ಈ ಯಂತ್ರಕ್ಕೆ ಐದು ವರ್ಷ ಅದೇ ಸಂಸ್ಥೆಯವರ ನಿರ್ವಹಣೆ ಮಾಡಬೇಕು" ಎಂದು ತಿಳಿಸಿದರು.

ಮ್ಯಾಮೋಗ್ರಫಿ ಯಂತ್ರ ಜಿಲ್ಲಾಸ್ಪತ್ರೆಯಲ್ಲಿ ಲಭ್ಯ:"ಸ್ತನ ಕ್ಯಾನ್ಸರ್ ಪತ್ತೆಮಾಡುವ ಮ್ಯಾಮೋಗ್ರಫಿ ಯಂತ್ರ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದೆ. ಅದು ಕೂಡಲೇ ಕಾರ್ಯಾರಂಭ ಮಾಡಬೇಕು. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಈ ಯಂತ್ರವನ್ನು ಖರೀದಿಸಲಾಗಿದೆ. ಜಿಲ್ಲೆಯ ನಾಗರೀಕರಿಗೆ ಈ ಮಾಹಿತಿ ನೀಡಬೇಕು ಹಾಗೂ ರೋಗಿಗಳಿಗೆ ನೀವು ಸಕಾಲದಲ್ಲಿ ಇದರಿಂದ ಅನುಕೂಲವಾಗಬೇಕು" ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

"ಸಿ.ಎಸ್.ಆರ್.ನಿಧಿಯಡಿ ಹತ್ತು ದಿನದೊಳಗೆ ಜಿಲ್ಲೆಗೆ ಎರಡು ಆಂಬುಲೆನ್ಸ್​ಗಳು ಪೂರೈಕೆಯಾಗಲಿವೆ. ಇವುಗಳಲ್ಲಿ ಒಂದನ್ನು ಗುಡ್ಡಗಾಡು ಪ್ರದೇಶವಾದ ಸಾತನೂರು-ಕೋಡಿಹಳ್ಳಿ ಭಾಗಕ್ಕೆ ಹಾಗೂ ಇನ್ನೊಂದು ರಾಮನಗರ ವ್ಯಾಪ್ತಿಗೆ ಉಪಯೋಗಿಸುವಂತೆ" ನಿರ್ದೇಶನ ನೀಡಿದರು.

"ಟಿಬಿ ಕಾಯಿಲೆ ಬಗ್ಗೆ ಜಿಲ್ಲೆಯಲ್ಲಿ ಅರಿವು ಮೂಡಿಸಬೇಕು, ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 4.5 ಲಕ್ಷ ಜನರು ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಅಭಿಯಾನ ಹಮ್ಮಿಕೊಂಡು ವಾಹನಗಳಲ್ಲಿ ರಿಫ್ಲೆಕ್ಟರ್ ಹಾಕಿಕೊಳ್ಳುವ ಬಗ್ಗೆ ಮಾಹಿತಿ ನೀಡಬೇಕು. ಜಿಲ್ಲಾ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು" ಎಂದು ಸೂಚನೆ ನೀಡಿದರು.

ಇದನ್ನೂ ಓದಿ:4 ತಿಂಗಳ ಹಸುಳೆಗೆ ಶಸ್ತ್ರಚಿಕಿತ್ಸೆ ಇಲ್ಲದೇ ಹೃದಯ ಸಮಸ್ಯೆ ಗುಣಪಡಿಸಿದ ಕೆಎಂಸಿ ಆಸ್ಪತ್ರೆ ವೈದ್ಯರ ತಂಡ

ABOUT THE AUTHOR

...view details