ಚಿತ್ರದುರ್ಗ:ಇಲ್ಲಿಯ ಕುದಾಪುರ ಸಮೀಪ ತಡರಾತ್ರಿ ಕಳ್ಳರ ತಂಡವೊಂದು ಬಂಧಿಸಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಘಟನೆ ನಡೆದಿದೆ.
ಆಂಧ್ರಪ್ರದೇಶದ ನೋಂದಣಿ ಸಂಖ್ಯೆ ಹೊಂದಿದ್ದ ಏಳು ಜನರಿದ್ದ ಬೊಲೆರೊ ವಾಹನ ಕುದಾಪುರ ಡಿಆರ್‌ಡಿಒ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಈ ವೇಳೆ ಗಸ್ತಿನಲ್ಲಿದ್ದ ನಾಯಕನಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಅನುಮಾನದ ಹಿನ್ನೆಲೆಯಲ್ಲಿ ವಾಹನ ತಡೆದು ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಕಳ್ಳರು ಭಯದಿಂದ ತಮ್ಮ ವಾಹನವನ್ನು ವೇಗವಾಗಿ ಓಡಿಸಿಕೊಂಡು ಬೋಸೆದೇವರಹಟ್ಟಿ ಕಡೆಗೆ ಸಾಗಿದ್ದಾರೆ. ಕೂಡಲೇ ಸಿಬ್ಬಂದಿ ಈ ವಿಷಯವನ್ನು ಪಿಎಸ್‌ಐ ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.
ಪಿಎಸ್‌ಐ ಠಾಣೆಯಲ್ಲಿದ್ದ ಸಿಬ್ಬಂದಿಯನ್ನು ಕರೆದುಕೊಂಡು ಜೀಪಿನಲ್ಲಿ ಕಳ್ಳರನ್ನು ಬೆನ್ನಟ್ಟಿದ್ದಾರೆ. ಪೊಲೀಸ್ ವಾಹನ ತಮ್ಮನ್ನು ಹಿಂಬಾಲಿಸುತ್ತಿರುವುದನ್ನು ಕಂಡ ಕಳ್ಳರು, ಮನುಮೈಲನಹಟ್ಟಿ ಕಡೆಗೆ ವಾಹನ ತಿರುಗಿಸಿದ್ದಾರೆ. ಅಲ್ಲಿಂದ ಕುದಾಪುರಕ್ಕೆ ಹೋಗಿದ್ದಾರೆ. ಅಲ್ಲಿ ಕಳ್ಳರ ವಾಹನ ಕಂಡ ಪಿಎಸ್‌ಐ ಶಿವಕುಮಾರ್, ಶರಣಾಗುವಂತೆ ಅವರಿಗೆ ಎಚ್ಚರಿಸಿದ್ದಾರೆ. ಈ ವೇಳೆ ಕಳ್ಳರು ಕಲ್ಲು ತೂರಿದ್ದು, ಪ್ರತಿಯಾಗಿ ಪಿಎಸ್ಐ ಮತ್ತು ಸಿಬ್ಬಂದಿ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ ಬುಕ್ಕಾಂಬೂದಿ ಮಾರ್ಗವಾಗಿ ವೇಗವಾಗಿ ಸಾಗಿದ ಕಳ್ಳರ ವಾಹನ, ಆಂಧ್ರಪ್ರದೇಶ ಗಡಿಯಲ್ಲಿ ಮರೆಯಾಗಿದೆ. ದಾಳಿಯಿಂದ ಪೊಲೀಸ್ ವಾಹನ ಜಖಂ ಆಗಿದೆ. ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಕೊಲೆ - MURDER CASE