ಕರ್ನಾಟಕ

karnataka

ETV Bharat / state

ಜು.31ರ ಬಳಿಕ ಬೆಂಗಳೂರು ಆಸ್ತಿ ತೆರಿಗೆ ರಿಯಾಯಿತಿಯ ಒಟಿಎಸ್​ ವ್ಯವಸ್ಥೆ ವಿಸ್ತರಣೆ ಇಲ್ಲ: ಡಿ.ಕೆ. ಶಿವಕುಮಾರ್​ - D K Shivakumar

ಒಟಿಎಸ್​ ವ್ಯವಸ್ಥೆ ಅಡಿಯಲ್ಲಿ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಇದರ ಅನುಕೂಲವನ್ನು ಬೆಂಗಳೂರಿಗರು ಬಳಸಿಕೊಳ್ಳಬೇಕು ಎಂದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್​
ಡಿ.ಕೆ. ಶಿವಕುಮಾರ್​ (ETV Bharat)

By ETV Bharat Karnataka Team

Published : Jun 11, 2024, 3:52 PM IST

Updated : Jun 11, 2024, 4:23 PM IST

ಡಿ.ಕೆ. ಶಿವಕುಮಾರ್​ (ETV Bharat)

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿಸಲು ಒಂದು ಬಾರಿ ಪರಿಹಾರ ಯೋಜನೆಯನ್ನು (OTS) ಜಾರಿಗೆ ತರಲಾಗಿದ್ದು, ಜು.31ರ ವರೆಗೆ ಒಟಿಎಸ್ ಅನುಕೂಲ ಪಡೆಯಬಹುದಾಗಿದೆ. ಬಳಿಕ ಯಾವುದೇ ಕಾರಣಕ್ಕೂ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಬಾಕಿ ವಸೂಲಾತಿಗೆ ಅವಕಾಶವಿದೆ. ಆದಾಗ್ಯೂ ನಾಗರಿಕರಿಗೆ ಸಹಾಯ ಮಾಡಲು ಸರ್ಕಾರ ಮತ್ತು ಬಿಬಿಎಂಪಿ ಒಟಿಎಸ್​ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಮತ್ತು ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ. ಇದರ ಅನುಕೂಲವನ್ನು ಬೆಂಗಳೂರಿಗರು ಸಂಪೂರ್ಣವಾಗಿ ಪಡೆಯಬೇಕು ಎಂದು ಮನವಿ ಮಾಡಿದರು.

ನಮಗೆ ಒಟ್ಟು 5,230 ಕೋಟಿ ರೂ. ಆಸ್ತಿ ತೆರಿಗೆ ಬರಬೇಕಾಗಿದೆ. ಬೆಂಗಳೂರಲ್ಲಿ 20 ಲಕ್ಷ ಆಸ್ತಿಗಳನ್ನು ಗುರುತಿಸಿದ್ದೇವೆ. ಈಗಾಗಲೇ 8.6 ಲಕ್ಷ ಆಸ್ತಿದಾರರು ತೆರಿಗೆ ಕಟ್ಟಿದ್ದಾರೆ. ಈವರೆಗೆ 1,300 ಕೋಟಿ ರೂ. ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇನ್ನೂ 3,900 ಕೋಟಿ ರೂ. ಆಸ್ತಿ ತೆರಿಗೆ ಬರಬೇಕಾಗಿದೆ. ಜು. 31ರ ವರೆಗೆ ಒನ್ ಟೈಂ ಸೆಟಲ್ ಮೆಂಟ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಸ್ಕೀಂ ಜಾರಿಗೆ ಬಂದ ಬಳಿಕ ಇಲ್ಲಿಯವರೆಗೆ 4 ಲಕ್ಷ ಸುಸ್ತಿದಾರರು ಸುಮಾರು 50 ಸಾವಿರ ಜನರು ಮಾತ್ರ ತೆರಿಗೆ ಪಾವತಿ ಮಾಡಿದ್ದಾರೆ. ಜು.31ರ ಬಳಿಕ ಈ ಸ್ಕೀಂ ಅನ್ನು ವಿಸ್ತರಿಸಲ್ಲ. ಡೆಡ್​ಲೈನ್ ಒಳಗೆ ಸಾರ್ವಜನಿಕರು ಇದರ ಅನುಕೂಲ ಪಡೆಯಬೇಕು. ಬಳಿಕ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತೆರಿಗೆ ವ್ಯಾಪ್ತಿಗೆ ಬಾರದೇ ಇರುವವರು ಬಹಳಷ್ಟು ಜನ ಇದ್ದಾರೆ. ಅವರು ಸೂಕ್ತ ದಾಖಲಾತಿ ನೀಡಿದರೆ 90 ದಿನಗಳಲ್ಲಿ ಅದನ್ನು ಪರಿಶೀಲಿಸುತ್ತೇವೆ. ದಾಖಲೆ ಪರಿಶೀಲಿಸಿ ಅದರನ್ವಯ ಎ ಅಥವಾ ಬಿ ಖಾತೆ ಕೊಡಲಾಗುತ್ತದೆ. ಬೆಂಗಳೂರಿನ ಎಲ್ಲಾ 20 ಲಕ್ಷ ಆಸ್ತಿಗಳ ದಾಖಲಾತಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈಗಾಗಲೇ 8 ಲಕ್ಷ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಮೂರು ತಿಂಗಳಲ್ಲಿ ಪ್ರಕ್ರಿಯೆ ಮುಗಿಸುವಂತೆ ಸೂಚನೆ ನೀಡಲಾಗಿದೆ. ಬಳಿಕ ಅವರ ಮನೆಗಳಿಗೆ ಖಾತೆ ಕಳುಹಿಸಿಕೊಡಲಾಗುವುದು ಎಂದರು.

ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ನಾಗರಿಕ ಸ್ವಯಂ ಘೋಷಣೆ ಆಧಾರಿತ ತಾತ್ಕಾಲಿಕ ಆಸ್ತಿ ತೆರಿಗೆ ಸಂಖ್ಯೆ, ನಾಗರಿಕ ಸ್ನೇಹಿ ಸಹಾಯ ಅಪ್ಲಿಕೇಶನ್, ನಮ್ಮ ಲೇಕ್ ಮೊಬೈಲ್ ಅಪ್ಲಿಕೇಶನ್, ನಮ್ಮ ಪಾರ್ಕ್ ಮೊಬೈಲ್‌ನಂತಹ ನಾಗರಿಕ ಸ್ನೇಹಿ ಉಪಕ್ರಮಗಳನ್ನು ಪರಿಚಯಿಸಿದೆ. ನಾಗರಿಕರು ಆನ್‌ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಸುಲಭವಾಗಿ ಪಾವತಿಸಲು ಲಿಂಕ್ https://bbmptax.karnataka.gov.in ಅನ್ನು ಬಳಸಬಹುದು. ಆನ್ ಲೈನ್ ಪೋರ್ಟಲ್ ನಲ್ಲಿ ಒಟಿಎಸ್​ ಪ್ರಕಾರ ಆಸ್ತಿ ತೆರಿಗೆ ಬಾಕಿಗಳನ್ನು ಈಗಾಗಲೇ ಕಡಿಮೆ ಮಾಡಲಾಗಿದೆ‌. 1ನೇ ಆಗಸ್ಟ್ 2024 ರಿಂದ ತೆರಿಗೆ ಕಾಯ್ದೆ ಪ್ರಕಾರ ಹೆಚ್ಚಾಗಲಿದೆ ಎಂದರು.

ಪಾರ್ಕ್ ಅವಧಿ ವಿಸ್ತರಣೆ:ಬೆಂಗಳೂರಲ್ಲಿ ಪಾರ್ಕ್ ತೆರೆಯುವ ಅವಧಿಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಈ ಮುಂಚೆ ಪಾರ್ಕ್ ಅನ್ನು ನಿಗದಿತ ಅವಧಿಯಲ್ಲಿ ತೆರೆಯಲಾಗುತ್ತಿತ್ತು. ಇನ್ನು ಮುಂದೆ ಉದ್ಯಾನವನಗಳನ್ನು ಸಾರ್ವಜನಿಕರಿಗೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ತೆರೆಯಲಾಗುತ್ತದೆ. ನಾಗರಿಕರ ಒತ್ತಾಯದ ಮೇರೆಗೆ ಪಾರ್ಕಿನ ಅವಧಿಯನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಅವಧಿ ವಿಸ್ತರಣೆಯನ್ನು ದುರ್ಬಳಕೆ ಮಾಡುವ ಪ್ರಕರಣಗಳು ಹೆಚ್ಚಾಗಲಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾರ್ವಜನಿಕರ ಒತ್ತಾಯ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ನಾಗರಿಕರು ಇದಕ್ಕೆ ಸಹಕಾರ ಕೊಡಬೇಕು. ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದೇವೆ ಎಂದರು.

ಫ್ಲೆಕ್ಸ್ ಅಳವಡಿಸಿದರೆ ಎಆರ್​ಒಗಳ ಮೇಲೆ ಕೇಸ್:ಅದೆಷ್ಟು ಎಚ್ಚರಿಕೆ ನೀಡಿದರೂ ಬೆಂಗಳೂರಲ್ಲಿ ಫ್ಲೆಕ್ಸ್​ಗಳನ್ನು ಹಾಕಲಾಗುತ್ತಿದೆ. ಬೇಡ ಅಂದರೂ ಫ್ಲೆಕ್ಸ್ ಗಳನ್ನು ಹಾಕುತ್ತಿದ್ದಾರೆ. ನನ್ನ ಫ್ಲೆಕ್ಸ್ ಹಾಕಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳು ನನಗೆ ದಂಡ ಹಾಕಿದ್ದರು. ಇನ್ನು ಮುಂದೆ ಫ್ಲೆಕ್ಸ್​ಗಳು ಕಂಡು ಬಂದರೆ ಆ ವ್ಯಾಪ್ತಿಯ ಸಹಾಯಕ ಕಂದಾಯ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಫ್ಲೆಕ್ಸ್ ತೆರವು ಮಾಡುವುದು ಆತನ ಜವಾಬ್ದಾರಿ. ಯಾವುದೇ ರಾಜಕೀಯ ಪಕ್ಷಗಳಾಗಲಿ, ಶಾಸಕರಾಗಲಿ, ಮಂತ್ರಿಗಳಾಗಲಿ ಅವರ ಫ್ಲೆಕ್ಸ್​ಗಳನ್ನು ಹಾಕಿದರೆ ಅವರ ವಿರುದ್ಧ ಕೇಸ್ ಹಾಕಬೇಕು ಎಂದು ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ:ವಾಣಿಜ್ಯ ತೆರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ: ತೆರಿಗೆ ಸಂಗ್ರಹದ ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ; ಸಿಎಂ ಖಡಕ್​ ಎಚ್ಚರಿಕೆ - Commercial Tax Department Meeting

Last Updated : Jun 11, 2024, 4:23 PM IST

ABOUT THE AUTHOR

...view details