ಕರ್ನಾಟಕ

karnataka

ETV Bharat / state

ಇ-ಖಾತೆ ಮಾಡಲು ಯಾವುದೇ ಡೆಡ್‌ಲೈನ್ ಇಲ್ಲ: ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

ಇ-ಖಾತೆ ಪ್ರಕ್ರಿಯೆಯನ್ನು ಸರಳೀಕರಣ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ (ETV Bharat)

By ETV Bharat Karnataka Team

Published : Oct 7, 2024, 7:30 PM IST

ಬೆಂಗಳೂರು: ಇ-ಖಾತೆ ಮಾಡಲು ಯಾವುದೇ ಡೆಡ್‌ಲೈನ್ ಇಲ್ಲ. ಯಾರೂ ಕೂಡ ಆತುರಪಡುವ ಅಗತ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿಂದು ಮಾತನಾಡಿದ ಅವರು, ಇ-ಖಾತೆಗೆ ಯಾವುದೇ ತುರ್ತು ಇಲ್ಲ. ಕಾಲಮಿತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರು ಪಕ್ಕಾ ಖಾತೆ ಹೊಂದಿರಬೇಕು. ಇಲ್ಲವಾದರೆ ವಂಚಿಸಿ ಮಾರಾಟ ನಡೆಯುತ್ತದೆ. ಮಧ್ಯವರ್ತಿಗಳಿಗೆ ಲಾಭವಾಗುತ್ತದೆ. ಖಾತೆ ನಿರ್ವಹಣೆ ಸರಿಯಾಗಿರದ ಕಾರಣ ನಿವೇಶನ ಡುಪ್ಲಿಕೇಟ್ ಮಾಡಿ ಮಾರಾಟ ಆಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನನುಕೂಲ ಆಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಡಿಸಿಎಂ ಬಳಿ ಮಾತನಾಡಿದ್ದೇನೆ. ಇ-ಖಾತೆ ಪ್ರಕ್ರಿಯೆ ಸರಳೀಕರಣ ಮಾಡುವಂತೆ ಮನವಿ ಮಾಡಿದ್ದೇನೆ. ಬಿಬಿಎಂಪಿ ಎಆರ್​ಒ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ಮಾಡಲು ಡಿಸಿಎಂ ಸೂಚನೆ ನೀಡಿದ್ದಾರೆ ಎಂದರು.

ಖಾತೆ ಸರಳೀಕರಣ ಹಾಗೂ ಜನರ ನೆರವಿಗಾಗಿ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ. ಎರಡು-ಮೂರು ದಿನಗಳಲ್ಲಿ ದಾಖಲಾತಿ ಅಪ್​ಲೋಡ್ ಮಾಡಲು ಬೆಂಗಳೂರು 1ರಲ್ಲಿ ಅವಕಾಶ ಸಿಗಲಿದೆ. ಖಾತೆ ನಿರ್ವಹಣೆ ಗೊಂದಲದ ವಿಚಾರವಾಗಿದೆ. ಸದ್ಯ ಯಾರಿಗೂ ಖಾತಾ ಬಗ್ಗೆ ಖಾತ್ರಿ ಇಲ್ಲ‌‌‌. 21 ಲಕ್ಷ ಆಸ್ತಿಗಳ ಡ್ರಾಫ್ಟ್‌ ಖಾತೆ ಮಾಹಿತಿಯನ್ನು ಬಿಬಿಎಂಪಿ ವೆಬ್​ಸೈಟ್‌ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಇದರಲ್ಲೇ ಸಾರ್ವಜನಿಕರು ಪರಿಶೀಲನೆ ಮಾಡಬಹುದು. ಇನ್ನೂ 1 ಲಕ್ಷ ಕರಡು ಖಾತೆ ಅಪ್​ಲೋಡ್ ಮಾಡಲು ಬಾಕಿ ಇದೆ ಎಂದು ಹೇಳಿದರು.

ಒಂದು ವಾರದಲ್ಲೇ ಇ-ಖಾತೆ ಪ್ರಕ್ರಿಯೆ ವ್ಯವಸ್ಥೆ ಸುಗಮವಾಗಲಿದೆ. ಬೆಂಗಳೂರಲ್ಲಿ ನಿತ್ಯ ಸುಮಾರು 200 ಆಸ್ತಿ ನೋಂದಣಿ ಆಗುತ್ತಿದೆ. ನಿವೇಶನ ಮಾರಾಟ ತುರ್ತಾಗಿ ಮಾಡುವವರಿಗೆ ಹೆಲ್ಪ್ ಡೆಸ್ಕ್ ಮಾಡಲಾಗಿದೆ. ಆಸ್ತಿಗೆ ಯುನೀಕ್ ಐಡಿ ಇಲ್ಲದ ಕಾರಣ ಇ-ಖಾತೆ ಮಾಡಲು ಸಮಸ್ಯೆ ಆಗುತ್ತಿದೆ. ಇ-ಖಾತಾ ಮಾಡಿದರೆ ಯುನೀಕ್ ಐಡಿ ಸಂಖ್ಯೆ ಸಿಗಲಿದೆ. ಮನೆಯಲ್ಲೇ ದಾಖಲಾತಿ ಅಪ್​ಲೋಡ್ ಮಾಡಲು ಅವಕಾಶವಿದೆ. ಮನೆಯಲ್ಲಿ ಮಾಡಲು ಆಗದೇ ಇದ್ದರೆ ಬೆಂಗಳೂರು ಒನ್ ಕೇಂದ್ರದಲ್ಲಿ ದಾಖಲು ಅಪ್​ಲೋಡ್ ಮಾಡಲು ಅವಕಾಶ ಇದೆ.‌ ನಿವೇಶನ ವಿಚಾರವಾಗಿ ಡಿಸ್ಪ್ಯೂಟ್ ಇದ್ದರೆ ಎಆರ್​ಒಗೆ ರೆಫರ್ ಆಗುತ್ತೆ. ಅವರು ಕೇಸ್ ಆಲಿಸಿ ಬಿಕ್ಕಟ್ಟು ಸಮಸ್ಯೆ ಪರಿಹರಿಸುತ್ತಾರೆ ಎಂದು ತಿಳಿಸಿದರು.

ಜಾತಿ ಗಣತಿ ವರದಿ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿ, ತಮ್ಮ ಅಭಿಪ್ರಾಯ ಹೇಳಲು ಎಲ್ಲರೂ ಸ್ವತಂತ್ರರು. ಪ್ರಕ್ರಿಯೆ ಸರಿಯಾಗಿ ಆಗಿಲ್ಲ ಎಂದು ಸಮುದಾಯದ ಸ್ವಾಮೀಜಿ ಹೇಳಿದ್ದರು. ವರದಿಯಲ್ಲಿ ಏನಿದೆ ಎಂದು ಹೇಳಲು ಆಗುವುದಿಲ್ಲ. ಸಿಎಂ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ತಿಳಿಸಿದ್ದಾರೆ. ನಮ್ಮ ಅಭಿಪ್ರಾಯವನ್ನು ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದರು.

ಮುಡಾ ಪ್ರಕರಣ ಮುಚ್ಚಲು ಜಾತಿ ಗಣತಿ ಪ್ರಸ್ತಾಪ ಎಂಬ ಆರೋಪದ ವಿಚಾರಕ್ಕೆ, ಬೇರೆ ಪಕ್ಷದವರೂ ಸಿಎಂ ನೇತೃತ್ವದ ಇಂದಿನ ಸಭೆಗೆ ಬಂದಿದ್ದಾರೆ. ಹಿಂದುಳಿದ ವರ್ಗಗಳಿಂದ ಹಲವು ವರ್ಷಗಳ ಕೂಗಿದೆ. ಅವರು ಪಕ್ಷಾತೀತವಾಗಿ ಮುಂದೆ ಹೆಜ್ಜೆ ಇಡಬೇಕು ಎಂದು ಹೇಳುತ್ತಿದ್ದಾರೆ. ರಾಜಕೀಯ ಪಿತೂರಿ ಇದೆ ಎಂದು ಹೇಳಲಾಗದು ಎಂದು ಹೇಳಿದರು.

ಇದನ್ನೂ ಓದಿ: ಜಾತಿ ಸಮೀಕ್ಷೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details