ಬೆಂಗಳೂರು:''ದೇಶದ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ದಾಳಿ ಹೋಗಲಾಡಿಸಲು ರಾಷ್ಟ್ರಪ್ರೇಮ ಜಾಗೃತಿಗೊಳಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಿದೆ. ಈ ಮೂಲಕ ದೇಶದ ಅಸ್ಮಿತೆಯನ್ನು ಪುನರ್ ಸ್ಥಾಪಿಸುವ ಅಗತ್ಯವಿದೆ'' ಎಂದು ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರು ಅಭಿಪ್ರಾಯಪಟ್ಟರು.
ಜಯನಗರದ ಎಂಇಎಸ್ ಮೈದಾನದಲ್ಲಿ ಅದಮ್ಯ ಚೇತನದ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಅನಂತ ಸೇವಾ ಉತ್ಸವದ ಅಸ್ಮಿತೆ-ಕ್ಷಾತ್ರತೇಜ ಉದ್ಘೋಷದ ಕುರಿತು ಮಾತನಾಡಿದ ಅವರು, ''ನಮ್ಮ ದೇಶ ಶಾಂತಿಗೆ ಹೆಸರುವಾಸಿ. ಯಾವುದೇ ದೇಶದ ಮೇಲೆ ಯುದ್ಧಕ್ಕೆ ಹೋಗಿಲ್ಲ. ಭಾರತ ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ. ಸಂಸ್ಕೃತ ನಾಶ ಮಾಡಿದರೆ ಆ ದೇಶದ ಸಂಸ್ಕೃತಿ ತಾನಾಗಿಯೇ ನಶಿಸಿಹೋಗುತ್ತದೆ, ಈ ಹಿಂದೆಯೇ ಪರಕೀಯರು ಈ ತಂತ್ರ ನಡೆಸಿ ವಿಫಲರಾಗಿದ್ದರು. ಈಗಲೂ ವಿಶ್ವದ ಹಲವು ದೇಶಗಳು ನಮ್ಮ ದೇಶದ ಸಂಸ್ಕೃತಿಯನ್ನು ನಾಶಪಡಿಸಲು ಸಮರ ಸಾರಿವೆ. ಸಾಂಸ್ಕೃತಿಕ ಯುದ್ಧ ಪ್ರಾರಂಭವಾಗಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಇದರಿಂದಾಗಿ ನಮ್ಮ ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ದೇಶದ ಅಸ್ಮಿತೆ, ರಾಷ್ಟ್ರಪ್ರಜ್ಞೆ ಮತ್ತು ಕ್ಷಾತ್ರತೇಜವನ್ನು ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ'' ಎಂದು ಸಲಹೆ ನೀಡಿದರು.
''ವಿಶ್ವಕ್ಕೆ ಅದ್ಭುತ ಜ್ಞಾನ ಸಂಪತ್ತು, ಆಧ್ಯಾತ್ಮಿಕ ಕೊಡುಗೆ ಕೊಟ್ಟಿರುವ ಏಕೈಕ ರಾಷ್ಟ್ರ ಭಾರತ. ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನದಲ್ಲಿ ದೇಶದ ಅಸ್ಮಿತೆ ಇದೆ. ಈಗಿನ ಕಾಲದಲ್ಲಿ ಕೆಲವರು ರಾಷ್ಟ್ರಗೀತೆ ಹೇಳುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ದೇಶದ ಅಸ್ಮಿತೆಗಾಗಿನ ಎಲ್ಲ ಶಕ್ತಿ ನಮ್ಮಲ್ಲಿದೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಅದರಂತೆ, ದೇಶದ ಅಸ್ಮಿತೆಗಾಗಿ ನಾವೆಲ್ಲರೂ ಇನ್ನಷ್ಟು ಜಾಗೃತಗೊಳ್ಳಬೇಕಿದೆ. ನಮ್ಮ ದೇಶದ ಇತಿಹಾಸವನ್ನು ತಿರುಚಿದ್ದು, ಅದನ್ನು ಸರಿಪಡಿಸುವ ಕೆಲಸವಾಗಬೇಕಿದೆ. ಹಲವು ಪರಕೀಯರು ನಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಹಿಂದೆಯೇ ವಿರೋಧಿಗಳಿಗೆ ನಮ್ಮವರು ತಕ್ಕ ತಿರುಗೇಟು ನೀಡಿದ್ದರು. ದೇಶದಲ್ಲಿ ಕೆಲ ನ್ಯೂನತೆಗಳಿಂದ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ಇದೀಗ ದೇಶದ ಅಸ್ಮಿತೆ ಉಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ'' ಎಂದು ಆತಂಕ ವ್ಯಕ್ತಪಡಿಸಿದರು.