ಬಾಲರಾಮನ ಮಾದರಿಯ ಬಾಲ ಗಣಪತಿಗೆ ಡಿಮ್ಯಾಂಡ್ (ETV Bharat) ಮೈಸೂರು:ಬಾಲ ರಾಮ ಮೂರ್ತಿಯ ಶಿಲ್ಪಿಯ ತವರೂರಾದ ಮೈಸೂರಿನಲ್ಲಿ ಈಗ ಬಾಲ ರಾಮನ ಮಾದರಿಯ ಗಣಪತಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಗಣೇಶ್ ಚತುರ್ಥಿ ಹಿನ್ನೆಲೆಯಲ್ಲಿ ನಗರದ ಯುವಕರು ಸೇರಿದಂತೆ ನಾನಾ ಕಡೆಗಳಿಂದ ಬಾಲ ರಾಮನ ಮಾದರಿಯ ಬಾಲ ಗಣಪತಿ ಮೂರ್ತಿಗಳನ್ನು ಹೇಳಿ ಮಾಡಿಸುತ್ತಿದ್ದಾರೆ.
ಕಳೆದ 20 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸಿಕೊಂಡು ಬರುತ್ತಿರುವ ಕೆ.ಟಿ.ಸ್ಟ್ರೀಟ್ನ ಕಲಾವಿದ ಮಂಜುನಾಥ್ ಎಂಬುವರು ಈ ಬಾಲ ರಾಮನ ಮಾದರಿಯ ಬಾಲ ಗಣಪತಿಯನ್ನು ಮಾಡಿದ್ದು, ಅದರ ವಿಶೇಷತೆಗಳ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.
ಹುಲಿಯ ಮೇಲೆ ಕುಳಿತಿರುವ ಗಣೇಶ (ETV Bharat) ಗೌರಿ-ಗಣೇಶ ಹಬ್ಬಕ್ಕೆ ಇನ್ನೂ ನಾಲ್ಕೈದು ದಿನಗಳು ಬಾಕಿ ಇದ್ದು ಈಗಿನಿಂದಲೇ ಪರಿಸರ ಸ್ನೇಹಿ ಗಣಪತಿಗೆ ನಗರಿಯಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದೆ. ಅದರಲ್ಲೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿದ ನಂತರ ಬಾಲ ರಾಮನ ಮಾದರಿಯಲ್ಲಿರುವ ಬಾಲ ಗಣಪನ ಮೂರ್ತಿಗೆ ಇನ್ನಿಲ್ಲದ ಬೇಡಿಕೆ ಇದೆ. ಈ ಬೇಡಿಕೆಗಳು ಹೆಚ್ಚಾಗಿದ್ದರಿಂದ ಕಲಾವಿದ ಮಂಜುನಾಥ್ ಅವರ ಕೈಚಳಕದಿಂದ ಅರಳಿದ ಬಾಲ ಗಣಪತಿ ಮೂರ್ತಿಗಳು ಗಮನ ಸೆಳೆಯುತ್ತಿವೆ.
''ಕಳೆದ 20 ವರ್ಷಗಳಿಂದ ಸಂಪ್ರದಾಯಕ ಶೈಲಿಯಲ್ಲಿ ಜೇಡಿ ಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ತಯಾರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ವಿಶೇಷ ಮಾದರಿಯ ಗಣಪತಿಗಳನ್ಜು ತಯಾರಿಸಲಾಗುತ್ತದೆ. ಯಶ್, ಪುನೀತ್ ರಾಜಕುಮಾರ್ ಜತೆ ಗಣೇಶ ಇರುವ ಮಾದರಿಗಳನ್ನು ಕಳೆದ ಎರಡು ವರ್ಷ ಮಾಡಲಾಗಿತ್ತು. ಈ ವರ್ಷ ಬಾಲ ರಾಮನ ವಿಗ್ರಹ ಮಾದರಿಯ ಬಾಲ ಗಣಪತಿ ಮೂರ್ತಿ ಮಾಡಿಕೊಡುವಂತೆ ನಗರದ ಯುವಕರ ತಂಡವೊಂದು ಫೋಟೋ ತಂದು ಕೊಟ್ಟರು. ಕಳೆದ 10-15 ದಿನಗಳಿಂದ ಜೇಡಿ ಮಣ್ಣಿನಲ್ಲಿ ರಾಮಲಲ್ಲಾ ಮಾದರಿಯ ಹಲವು ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದೆ. ಇವು 3 ಅಡಿ ಎತ್ತರ ಇವೆ. ಈ ವಿಗ್ರಹ ತಯಾರಾದ ಬಳಿಕ ಬೇಡಿಕೆಗಳು ಹೆಚ್ಚಾದವು. ಆದರೆ, ಸಮಯದ ಅಭಾವದಿಂದ ಬೇಡಿಕೆಗಳಿಗೆ ತಕ್ಕಂತೆ ಪೂರ್ತಿ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ'' ಎಂದು ಕಲಾವಿದ ಮಂಜುನಾಥ್ ಈ ಬಗ್ಗೆ ವಿವರಣೆ ನೀಡಿದರು.
''ಬಾಲ ರಾಮನ ರೀತಿಯ ಬಾಲ ಗಣಪ, ರಾಘವೇಂದ್ರ ಸ್ವಾಮಿಯ ಮಾದರಿಯ ಗಣಪ, ಹುಲಿಯ ಮೇಲೆ ಕುಳಿತಿರುವ ಗಣೇಶ ಹಾಗೂ ಕುಕ್ಕೆ ಸುಬ್ರಮಣ್ಯ ಸ್ವಾಮಿ ಮಾದರಿಯ ಗಣಪತಿಯನ್ನ ಮಾಡಲಾಗಿದೆ. ಇದೇ ರೀತಿ ಸಾವಿರಾರು ಮಣ್ಣಿನ ಗಣಪತಿ ಮಾಡಲಾಗಿದೆ'' ಎನ್ನುತ್ತಾರೆ ಕಲಾವಿದ ಮಂಜುನಾಥ.
ಇದನ್ನೂ ಓದಿ:ಬೆಳಗ್ಗೆ ಇಡ್ಲಿ, ದಿನವಿಡೀ ಪಾನ್ ವ್ಯಾಪಾರ: ಈಗ ಪರಿಸರಸ್ನೇಹಿ ಗಣೇಶನ ತಯಾರಿಸುತ್ತಿರುವ ಕಾಯಕಯೋಗಿ! - story of a hard worker